ಮುಸ್ಲಿಮರ ಅತೃಪ್ತಿ ಬೆನ್ನಲ್ಲೇ ಮೂರು ವಾರಗಳಲ್ಲಿ ಮೂರು ನೀತಿ ಬದಲಿಸಿದ ಕೇರಳ ಸರಕಾರ

Prasthutha|

ತಿರುವನಂತಪುರ: ರಾಜ್ಯದಲ್ಲಿ ಮುಸ್ಲಿಮರು ಅತೃಪ್ತರಾಗಿರುವುದನ್ನು ಅರಿತ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ- ಎಲ್ ಡಿಎಫ್ ಕಳೆದ ಕೆಲವು ಮೂರು ವಾರಗಳಲ್ಲಿ ತನ್ನ ಮೂರು ಹೊಸ ನೀತಿಗಳನ್ನು ಬದಲಿಸಿಕೊಂಡಿದೆ.

- Advertisement -

 ಸಮಾನ ಲಿಂಗ ಸಮಾನತೆಯ ಸಮವಸ್ತ್ರ, ಜಿಲ್ಲಾ ಮ್ಯಾಜಿಸ್ಟ್ರೇಟರ ಆಯ್ಕೆ ಮತ್ತು ವಕ್ಫ್ ಮಂಡಳಿ ನೇಮಕಾತಿಗಳು. ಪಾರಂಪರಿಕವಾಗಿ ಮುಸ್ಲಿಮರು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲಿಸುತ್ತ ಬಂದಿದ್ದಾರೆ. ಎಡರಂಗವನ್ನು ಕೂಡ ಬೆಂಬಲಿಸುವ ದೊಡ್ಡ ವರ್ಗವಿದೆ. ಸಿಪಿಎಂ ಹೀಗೆ ತನ್ನ ನೀತಿ ಬದಲಿಸಲು ಕಾರಣ ಅಲ್ಪಸಂಖ್ಯಾತರ ಆಕ್ರೋಶವೆನ್ನಲಾಗಿದೆ.

ಸಿಪಿಎಂನ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿಯವರು ಶಾಲೆಗಳಲ್ಲಿ ಲಿಂಗ ಸಮಾನತೆಯ ಸಮವಸ್ತ್ರ ಹೇರುವುದಿಲ್ಲ ಎಂದು ಆಗಸ್ಟ್ 3ರಂದು ಹೇಳಿದರು. ವಿದ್ಯಾಲಯಗಳಲ್ಲಿ ಲಿಂಗ ಸಮಾನತೆಯತ್ತ ಸರಕಾರ ಕೆಲಸ ಮಾಡಲಿದೆ, ಅದರಲ್ಲಿ ಶಾಲಾ ಸಮವಸ್ತ್ರವೂ ಸೇರಿದೆ ಎಂದು ಹೇಳಿದ 48 ಗಂಟೆಗಳಲ್ಲಿ ಸಚಿವರು ತನ್ನ ನೀತಿಯನ್ನು ಬದಲಿಸಿ ಹೇಳಿಕೆ ನೀಡಿದ್ದಾರೆ.

- Advertisement -

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಶಾಸಕ ಎಂ. ಕೆ. ಮುನೀರ್ ಅವರು ಸಿಪಿಎಂ ಪಕ್ಷವು ಲಿಂಗ ಸಮಾನತೆಯ ಹೆಸರಿನಲ್ಲಿ ಮಕ್ಕಳ ಧಾರ್ಮಿಕತೆಯನ್ನು ದೂರ ಮಾಡುತ್ತಿದೆ ಎಂದು ಹೇಳಿದ್ದರು. ಸಚಿವ ಶಿವನ್ ಕುಟ್ಟಿಯವರು ಐಯುಎಂಎಲ್ ಅಭಿಪ್ರಾಯವು 16ನೇ ಶತಮಾನಕ್ಕೆ ಸೇರಿದ್ದು, ಈಗ ಕಾಲ ಬದಲಾಗಿದೆ ಎಂದು ತಿರುಗೇಟು ನೀಡಿದ್ದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರಕಾರವು ಲಿಂಗ ತಾರತಮ್ಯವಿಲ್ಲದೆ ಸಮವಸ್ತ್ರ ಧರಿಸಬೇಕು ಮತ್ತು ಒಂದೇ ಬೆಂಚಿನಲ್ಲಿ ಗಂಡು ಹೆಣ್ಣುಗಳು ಕುಳಿತು ಲಿಂಗ ಸಮಾನತೆ ಸಾಧಿಸಬೇಕು ಎಂದು ಹೇಳಿದ್ದರು. ಪ್ರಗತಿಪರ ಮುನೀರ್ ಅವರು ಇಂಥ ವಿಷಯಗಳ ಬಗ್ಗೆ ಸಮುದಾಯದೊಳಗೇ ಭಿನ್ನಾಭಿಪ್ರಾಯ ಇದೆ ಎಂದು ಹೇಳಿದ್ದರು.

ಮುಸ್ಲಿಮರ ನಿರಂತರ ಪ್ರತಿಭಟನೆಯ ಕಾರಣಕ್ಕೆ ಅಲಪ್ಪುಳ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರಾಗಿ ಒಂದು ವಾರದ ಹಿಂದಷ್ಟೆ ನೇಮಕಗೊಂಡಿದ್ದ ಶ್ರೀರಾಂ ವೆಂಕಿಟರಾಮನ್ ಅವರನ್ನು ಎಲ್ ಡಿಎಫ್ ಸರಕಾರವು ಸೋಮವಾರ ಬೇರೆಡೆಗೆ ವರ್ಗಾಯಿಸಿದೆ. ವೆಂಕಿಟರಾಮನ್ ಮದ್ಯಪಾನ ಮಾಡಿ ಕಾರು ಓಡಿಸಿ 2019ರಲ್ಲಿ ಪತ್ರಕರ್ತ ಬಶೀರ್ ಸಾವಿಗೆ ಕಾರಣವಾದ ಆರೋಪ ಹೊತ್ತಿದ್ದರು. ಬಶೀರ್ ಅವರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಸುನ್ನಿ ವಿಭಾಗದ ಸಿರಾಜ್ ದಿನ ಪತ್ರಿಕೆಯ ವರದಿಗಾರರಾಗಿದ್ದರು.

ವೆಂಕಿಟರಾಮನ್ ನೇಮಕವಾಗುತ್ತಲೇ ಸರಕಾರದ ವಿರುದ್ಧ ಮುಸ್ಲಿಮರು ಪ್ರತಿಭಟನೆ ಆರಂಭಿಸಿದ್ದರು. ಕಾಂತಪುರಂ ನೇತೃತ್ವದಲ್ಲಿ ಕಳೆದ ಶನಿವಾರ ಕೂಡಲೇ ಕಲೆಕ್ಟರನ್ನು ವರ್ಗಾಯಿಸುವಂತೆ ಭಾರೀ ಪ್ರತಿಭಟನೆ ನಡೆದಿತ್ತು. ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮುಸ್ಲಿಮರನ್ನು ಸಿಪಿಎಂ ಕಡೆಗಣಿಸಲಾಗದು ಎಂದು ಕಾಂತಪುರಂ ಎಚ್ಚರಿಸಿದ್ದರು. ಈ ಪ್ರತಿಭಟನೆಯ ಎರಡೇ ದಿನದಲ್ಲಿ ಸರಕಾರ ಐಎಎಸ್ ಅಧಿಕಾರಿ ವೆಂಕಿಟರಾಮನ್ ರನ್ನು ವರ್ಗಾಯಿಸಿತು.

ಪಕ್ಷದ ಮುಖವಾಣಿ ದೇಶಾಭಿಮಾನಿ ಪತ್ರಿಕೆಗೆ ಗುರುವಾರ ಲೇಖನವೊಂದನ್ನು ಬರೆದಿರುವ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು, ವೆಂಕಿಟರಾಮನ್ ವರ್ಗಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಸಾರ್ವಜನಿಕ ಭಾವನೆಗಳಿಗೆ ಬೆಲೆ ಕೊಟ್ಟು ವೆಂಕಿಟರಾಮನ್ ರನ್ನು ವರ್ಗಾಯಿಸಲಾಗಿದೆ. ಸಿಪಿಎಂ ಪಕ್ಷವು ಯಾವಾಗಲೂ ಪ್ರಜಾಸತ್ತಾತ್ಮಕ ಹಾದಿಯ ಪ್ರತಿಭಟನೆಗಳಿಗೆ ಬೆಲೆ ಕೊಡುತ್ತದೆ” ಎಂದು ಬರೆದಿದ್ದಾರೆ.

ಕಲೆಕ್ಟರ್ ರ ವರ್ಗಾವಣೆಯು ತಪ್ಪು ಮತ್ತು ಅಪಾಯಕಾರಿ ಸಂದೇಶವನ್ನುನೀಡುತ್ತದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಒತ್ತಡ ತಾಳಿಕೊಳ್ಳುವ ಶಕ್ತಿಯಿಲ್ಲದೆ ಸರಕಾರ ಈ ರೀತಿ ನಡೆದುಕೊಂಡಿದೆ ಎಂದೂ ಅವರು ಹೇಳಿದರು.

ಜು. 20ರಂದು ಪಿಣರಾಯಿ ವಿಜಯನ್ ಸರಕಾರವು ಐಯುಎಂಎಲ್ ಮತ್ತು ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯ ಬಳಿಕ ವಕ್ಫ್ ಬೋರ್ಡಿಗೆ ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳುವ ತೀರ್ಮಾನವನ್ನು ಹಿಂದೆಗೆದುಕೊಂಡಿತು. ಐಯುಎಂಎಲ್ ವಿದ್ವಾಂಸರ ಸಮಸ್ತ ಕೇರಳ ಜೆಂಇಯ್ಯತುಲ್ ಉಲಾಮ ಸಂಸ್ಥೆಯ ಬಗ್ಗೆ ವಿಶ್ವಾಸವಿಟ್ಟು ಪಿಣರಾಯಿ ಸರಕಾರವು ಆದೇಶ ಹಿಂದೆಗೆದುಕೊಂಡಿತು. ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಐಯುಎಂಎಲ್ ಮತ್ತು ಸಮಸ್ತ ಸದಾ ಒಟ್ಟಿಗೇ ಹೋಗುವುದನ್ನು ಪಿಣರಾಯಿ ಗಮನಕ್ಕೆ ತೆಗೆದುಕೊಂಡಿದ್ದಾರೆ.

Join Whatsapp