ತಿರುವನಂತ ಪುರಂ: ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್‌ಗೆ ಭಾರೀ ಮುಖಭಂಗವಾಗಿದೆ. ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಅವರು ಮಾಡಿದ್ದ ನಾಲ್ವರು ಸದಸ್ಯರ ನಾಮನಿರ್ದೇಶನಗಳನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
ರಾಜ್ಯಪಾಲರು ಎಬಿವಿಪಿ ಜೊತೆ ನಂಟಿನ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ವಿವಾದ ಭುಗಿಲೆದ್ದಿತ್ತು.
ಕುಲಪತಿಯಾಗಿ ಸೆನೆಟ್‌ಗೆ ನೇಮಕಾತಿಗಳನ್ನು ಮಾಡುವುದು ರಾಜ್ಯಪಾಲರ ವಿವೇಚನೆಯಾಗಿದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಧಿಕಾರದ ಯಾವುದೇ ಅನಿಯಂತ್ರಿತ ಬಳಕೆಯು ಭಾರತದ ಸಂವಿಧಾನದ 14ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಲಾದ ಸಮಾನತೆ ನಿಯಮ ಮತ್ತು 16ನೇ ವಿಧಿಯಲ್ಲಿ ಅಂತರ್ಗತವಾಗಿರುವ ತಾರತಮ್ಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ಎಸ್‌ಎಫ್‌ಐನ ಕೇರಳ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಮಾತನಾಡಿದ್ದು, ನಾವು ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ, ಇದು ಕಾನೂನು ಮಾತ್ರವಲ್ಲದೆ ರಾಜ್ಯಪಾಲರಿಗೆ ರಾಜಕೀಯ ಹಿನ್ನಡೆಯೂ ಆಗಿದೆ. ಅವರು ತಮ್ಮ ಸಾಂವಿಧಾನಿಕ ಸ್ಥಾನವನ್ನು ರಾಜಕೀಯವಾಗಿ ಬಳಸಿಕೊಂಡರು ಮತ್ತು ಕೇರಳದ ಕ್ಯಾಂಪಸ್‌ಗಳಲ್ಲಿ ಆರೆಸ್ಸೆಸ್ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು, ಆದರೆ ಇದೀಗ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.