ಶಾಸಕ ಹರೀಶ್ ಪೂಂಜಾಗೆ ನೋಟಿಸ್ ನೀಡಿ ಬಂಧಿಸದೇ ತೆರಳಿದ ಪೊಲೀಸರು

Prasthutha|

ಬೆಳ್ತಂಗಡಿ: ಪೊಲೀಸ್ ಇನ್ಸ್ ಪೆಕ್ಟರಿಗೆ ಧಮ್ಕಿ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜ ಮನೆಗೆ ಪೊಲೀಸರು ಪ್ರವೇಶಿಸಿದ್ದು, ಹೈಡ್ರಾಮಾವೇ ನಡೆದಿತ್ತು. ಇನ್ನೇನು ಹರೀಶ್ ಪೂಂಜಾ ಬಂಧನವಾಗುತ್ತದೆ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಈ ಮಧ್ಯೆ, ಬಿಜೆಪಿಯ ನಾಯಕರು ಸೇರಿದಂತೆ ಕಾರ್ಯಕರ್ತರ ದಂಡೇ ಅವರನ್ನು ಬಂಧಿಸದಂತೆ ಒತ್ತಾಯಿಸಿತ್ತು. ಕೊನೆಗೂ ಪೊಲೀಸರು ನೋಟಿಸ್ ನೀಡಿ ಬಂಧಿಸದೇ ತೆರಳಿದ್ದಾರೆ.

- Advertisement -

ಶಾಸಕ ಹರೀಶ್ ಪೂಂಜ ವಿಚಾರಣೆಗೆ ಹಾಜರಾಗೋದಕ್ಕೆ ಕಾಲಾವಕಾಶವನ್ನು ಕೋರಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು 3 ದಿನಗಳ ಕಾಲಾವಕಾಶ ನೀಡುವಂತೆ ನೋಟಿಸ್ ನೀಡಿ, ಅವರನ್ನು ಬಂಧಿಸದೇ ಮನೆಯಿಂದ ತೆರಳಿದ್ದಾರೆ. ಈ ಮೂಲಕ ಶಾಸಕ ಹರೀಶ್ ಪೂಂಜ ನಿವಾಸದ ಮುಂದಿನ ಹೈಡ್ರಾಮಕ್ಕೆ ತೆರೆ ಬಿದ್ದಂತೆ ಆಗಿದೆ.

ಅಕ್ರಮ ಕಲ್ಲು ಗಣಿಗಾರಿಕೆ (Illegal quarrying) ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಕೇಸ್‌ ದಾಖಲಾಗಿತ್ತು. ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲದಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆಗೆ ಬುಧವಾರ (ಮೇ 22) ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್‌ ಸುಬ್ಬಪೂರ್ ಮಠ್‌ ಮತ್ತು ಪಿಎಸ್‌ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಆಗಮಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಧಾವಿಸಿದ್ದರು.

Join Whatsapp