ತಿರುವನಂತಪುರಂ : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ವೇಳೆ ಕಪ್ಪುಹಣ ಲೂಟಿಯಾದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ತನಿಖೆ ನಡೆಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವ ಆಂತರಿಕ ಸಮಿತಿಯೊಂದನ್ನು ರಚಿಸಲಿದೆ. ಕೊಚ್ಚಿಯಲ್ಲಿ ಕೇರಳ ಬಿಜೆಪಿ ಕೋರ್ ಕಮಿಟಿ ಸಭೆ ನಡೆದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ತನಿಖಾ ಸಮಿತಿಯಲ್ಲಿ ಹಿರಿಯ ನಾಗರಿಕ ಸೇವಾ ಅಧಿಕಾರಿಗಳಿರಲಿದ್ದಾರೆ. ಈ ಬಗ್ಗೆ ಪಕ್ಷದೊಳಗೆ ಈಗಾಗಲೇ ಮಾತುಕತೆ ಆರಂಭವಾಗಿದೆ. ಇದು ಈಗ ಅತ್ಯಂತ ಪ್ರಮುಖವಾದ ವಿಚಾರವಾಗಿದ್ದು, ಈ ಬಗ್ಗೆ ಕೋರ್ ಕಮಿಟಿಯಲ್ಲಿ ಮಾತುಕತೆ ನಡೆದಿದೆ ಮತ್ತು ಆಂತರಿಕ ತನಿಖಾ ಸಮಿತಿ ರಚಿಸಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಕಾರ್ಯದರ್ಶಿ ಮತ್ತು ಚಾಲಕನನ್ನು ವಿಶೇಷ ತನಿಖಾ ತಂಡ ವಿಚಾರಣೆ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.