ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ ಇದ್ದರೆ ತಪ್ಪೇನು? ಕೇರಳ ಹೈಕೋರ್ಟ್ ಪ್ರಶ್ನೆ

Prasthutha|

ತಿರುವನಂತಪುರ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿದಾರರ ಆಕ್ಷೇಪಣೆಯನ್ನು ಕೇರಳ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.

- Advertisement -

ಅರ್ಜಿದಾರರು ಜವಾಹರಲಾಲ್ ನೆಹರೂ ನಾಯಕತ್ವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಪಿವಿ ಕುಂಞಿ ಕೃಷ್ಣನ್ ಅವರಿದ್ದ ಪೀಠ ವಿಶ್ವವಿದ್ಯಾಲಯಕ್ಕೆ ನೆಹರೂ ಹೆಸರು ಇಡಲಾಗಿದೆ. ಇದು ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇರುವುದಕ್ಕಿಂತ ಹೇಗೆ ಭಿನ್ನ ಎಂದು ವಿವರಿಸುವಂತೆ ಕೇಳಿದರು.

“ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಹೆಸರಿದ್ದರೆ ಏನು ಸಮಸ್ಯೆ? ನೀವು ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ, ಅವರೂ ಪ್ರಧಾನಿಯಾಗಿದ್ದವರು. ಆ ಹೆಸರನ್ನು ತೆಗೆದುಹಾಕುವಂತೆ ವಿಶ್ವವಿದ್ಯಾಲಯವನ್ನು ಏಕೆ ಕೇಳಬಾರದು?” ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಟೀಕಿಸಿದರು.

- Advertisement -

ಬೇರೆ ದೇಶಗಳಲ್ಲಿ ನೀಡಲಾಗುವ ಲಸಿಕೆ ಪ್ರಮಾಣಪತ್ರಗಳಲ್ಲಿ ಆಯಾ ನಾಯಕರ ಭಾವಚಿತ್ರಗಳಿಲ್ಲ ಎಂಬ ಅರ್ಜಿದಾರರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು “ಅವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆಪಡುವುದಿಲ್ಲ, ನಮ್ಮವರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಜನಾದೇಶದ ಕಾರಣದಿಂದ ಪ್ರಧಾನಿಯಾಗಿದ್ದಾರೆ. ನಾವು ವಿಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಹೊಂದಿದ್ದರೂ ಅವರು ಇನ್ನೂ ನಮ್ಮ ಪ್ರಧಾನಿ” ಎಂದು ನ್ಯಾಯಾಧೀಶರು ಹೇಳಿದರು. ದೇಶದ ನಾಗರಿಕರಿಂದ ಆಯ್ಕೆಯಾದ ಪ್ರಧಾನಿಯ ಬಗ್ಗೆ ಏಕೆ ನಾಚಿಕೆಪಡುತ್ತೀರಿ ಎಂದು ನ್ಯಾಯಾಲಯವು ಅರ್ಜಿದಾರರನ್ನು ಪದೇ ಪದೇ ಕೇಳಿತು.

ತಾನು ಖಾಸಗಿ ಆಸ್ಪತ್ರೆಯಲ್ಲಿ ದರ ಪಾವತಿ ಮಾಡಿ ಲಸಿಕೆ ಪಡೆದಿದ್ದು, ನಂತರ ಈ ಕುರಿತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇನೆ. ಪ್ರಮಾಣಪತ್ರದಲ್ಲಿ ಪ್ರದಾನಿ ಮೋದಿಯವರ ವರ್ಣಚಿತ್ರವಿದೆ. ಅದರೊಟ್ಟಿಗೆ “ ಔಷಧ ಮತ್ತು ಕಠಿಣ ನಿಯಂತ್ರಣ” ಎಂದು ಮಲಯಾಳಂನಲ್ಲಿಯೂ, ‘ಭಾರತವು ಒಗ್ಗೂಡಿ ಕೋವಿಡ್ ಅನ್ನು ಸೋಲಿಸಲಿದೆ’ ಎಂದು ಇಂಗ್ಲಿಷ್ನಲ್ಲಿಯೂ ಬರೆದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳೆಂದು ಸೂಚಿಸಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಹಾಗೂ ವಕೀಲ ಅಜಿತ್ ಜಾಯ್ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಲಸಿಕೆ ಕಾರ್ಯಕ್ರಮವನ್ನು ಪ್ರಧಾನಿಯವರ ಪ್ರಚಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು.

( ಕೃಪೆ: ಬಾರ್ ಆ್ಯಂಡ್ ಬೆಂಚ್ )



Join Whatsapp