ನವದೆಹಲಿ : ಪಡಿತರ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ವಿತರಿಸುವ ತಮ್ಮ ಸರಕಾರದ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡದಿರುವ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನಮ್ಮ ಸರಕಾರವು ಕೇಂದ್ರದ ಷರತ್ತುಗಳಿಗೆ ಬದ್ಧವಾಗಿ ಫಲಾನುಭವಿಗಳಿಗೆ ಉಚಿತವಾಗಿ ಪಡಿತರ ವಿತರಿಸುವ ಯೋಜನೆ ರೂಪಿಸಿದೆ. ಆದರೆ ಈ ಯೋಜನೆ ಜಾರಿಯಾಗುವ ಎರಡು ದಿನಗಳ ಮುಂಚೆ ಅವರು ಅನುಮತಿ ನೀಡಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಡಿತರ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದೇವೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿತ್ತು. ಇದರ ಜಾರಿಗೆ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ಕೇಂದ್ರ ಇದಕ್ಕೆ ತಡೆಯೊಡ್ಡಿತು ಎಂದು ಅವರು ತಿಳಿಸಿದ್ದಾರೆ.
ಅನುಮತಿ ಪಡೆಯಲಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಒಂದು ಬಾರಿ ಅಲ್ಲ, ಐದು ಬಾರಿ ಕೇಳಿದ್ದೇವೆ. ಕಾನೂನು ದೃಷ್ಟಿಯಿಂದ ನೋಡುವುದಾದರೆ ನಮಗೆ ಕೇಂದ್ರದ ಅನುಮತಿ ಅಗತ್ಯವಿಲ್ಲ. ಸೌಜನ್ಯಕ್ಕಾಗಿ ಅನುಮತಿ ಕೇಳಿದ್ದೇವೆ. ಬೇಕಾದರೆ, ಯೋಜನೆಯ ಸಂಪೂರ್ಣ ಶ್ರೇಯಸ್ಸು ಅವರೇ ತೆಗೆದುಕೊಳ್ಳಲಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.