ಚುನಾವಣಾ ಫಲಿತಾಂಶ ತಕರಾರು ಕುರಿತು ತಾವು ಸಲ್ಲಿಸಿದ ಅರ್ಜಿಯನ್ನು ಬೇರೆ ಪೀಠಕ್ಕೆ ಮರು ನಿಗದಿ ಮಾಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ನಂದಿಗ್ರಾಮದಿಂದ ಚುನಾಯಿತರಾಗಿರುವುದನ್ನು ಪ್ರಶ್ನಿಸಿ ತಾವು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೌಶಿಕ್ ಚಂದಾ ಅವರಿರುವ ಪೀಠದಿಂದ ಮರುನಿಯೋಜಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಮಮತಾ ಪರ ವಕೀಲ ಸಂಜಯ್ ಬಸು ಅವರ ಮೂಲಕ ಬರೆಯಲಾದ ಪತ್ರದಲ್ಲಿ, ನ್ಯಾ.ಚಂದಾ ಅವರು ನ್ಯಾಯಾಧೀಶರಾಗುವ ಮೊದಲು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು ಇದು ಪಕ್ಷಪಾತಕ್ಕೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
“ಭಾರತೀಯ ಜನತಾ ಪಕ್ಷದ ಸದಸ್ಯರಾದ ಸುವೇಂದು ಅಧಿಕಾರಿಯವರ ಚುನಾವಣಾ ಗೆಲುವನ್ನು ಪ್ರಶ್ನಿಸಿ ನನ್ನ ಕಕ್ಷೀದಾರರು ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ನ್ಯಾಯ ನಿರ್ಣಯದಲ್ಲಿ ರಾಜಕೀಯ ಸಂಕೀರ್ಣ ಪರಿಣಾಮಗಳೂ ಇರಲಿವೆ. ನ್ಯಾ. ಚಂದಾ ಅವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು ಎಂದು ನನ್ನ ಕಕ್ಷೀದಾರರ ಅರಿವಿಗೆ ಬಂದಿದೆ. ಆದ್ದರಿಂದ, ಗೌರವಾನ್ವಿತ ನ್ಯಾಯಮೂರ್ತಿಗಳು ಚುನಾವಣಾ ಅರ್ಜಿಯನ್ನು ಕೈಗೆತ್ತಿಕೊಂಡರೆ, ಪ್ರತಿವಾದಿಯ ಪರವಾಗಿ ಮತ್ತು ಅಥವಾ ನನ್ನ ಕಕ್ಷೀದಾರರ ವಿರುದ್ಧ ಅವರ ಕಡೆಯಿಂದ ಪಕ್ಷಪಾತ ಉಂಟಾಗಬಹುದು ಎಂಬ ಬಗ್ಗೆ ನನ್ನ ಕಕ್ಷೀದಾರರ ಮನಸ್ಸಿನಲ್ಲಿ ಸಕಾರಣವಾದ ಆತಂಕವಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯಾವುದೇ ಸಂದರ್ಭದಲ್ಲಿ, ನ್ಯಾಯಮೂರ್ತಿಗಳು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು ಚುನಾವಣಾ ಅರ್ಜಿಯಲ್ಲಿ ಪ್ರತಿವಾದಿಯು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ನ್ಯಾಯಮೂರ್ತಿಗಳು ನೀಡುವ ತೀರ್ಪು ಅವರ ಸ್ವಂತ ಕಾರಣದಿಂದ ಹೊರಬಂದಿದೆ ಎನ್ನಬಹುದು ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ನ್ಯಾಯಾಂಗದಲ್ಲಿ ಜನತೆ ಇರಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಚುನಾವಣಾ ಅರ್ಜಿಯನ್ನು ಮರುನಿಯೋಜಿಸುವಂತೆ ಕೋರಲಾಗಿದೆ.