ಹೈದರ್ಪೊರ ಎನ್ಕೌಂಟರ್: ಅಮೀರ್ ಮಗ್ರೆ ಮೃತದೇಹ ಹೊರತೆಗೆದು ತಂದೆಗೆ ಒಪ್ಪಿಸಲು ಆದೇಶಿಸಿದ ಕಾಶ್ಮೀರ ಹೈಕೋರ್ಟ್

Prasthutha|

ಕಾಶ್ಮೀರ: ಕಳೆದ ವರ್ಷ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ವೇಳೆ ಕಾಶ್ಮೀರದ ಹೈದರ್ ಪೋರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟ ನಾಲ್ವರಲ್ಲಿ ಒಬ್ಬರಾದ ಅಮೀರ್ ಮಗ್ರೆ ಅವರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಅವರ ತಂದೆಗೆ ಒಪ್ಪಿಸುವಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಆದೇಶಿಸಿದೆ. 

- Advertisement -

ಧಾರ್ಮಿಕ ವಿಧಿವಿಧಾನಗಳಿಗೆ ಅನುಗುಣವಾಗಿ ಸ್ಥಳೀಯ ಸ್ಮಶಾನದಲ್ಲಿ ಅಮೀರ್ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಅಮೀರ್ ತಂದೆ ಮುಹಮ್ಮದ್ ಲತೀಫ್ ಮಗ್ರೆ ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿತು.

ಸಂವಿಧಾನದ 21ನೇ ವಿಧಿ ಒದಗಿಸುವ ಜೀವಿಸುವ ಹಕ್ಕು ಘನತೆ ಮತ್ತು ಸಭ್ಯತೆಯಿಂದ ಜೀವಿಸುವ ಹಕ್ಕನ್ನೂ ಒಳಗೊಂಡಿದೆ ಇದು ಮೃತದೇಹವನ್ನು ಗೌರವದಿಂದ ಕಾಣುವುದಕ್ಕೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

- Advertisement -

“ದೇಹ ಬಹಳಷ್ಟು ಕೊಳೆತಿದ್ದು ಹಸ್ತಾಂತರಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಅಥವಾ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದ್ದರೆ, ವಡ್ಡರ್ ಪಯೀನ್ ಸ್ಮಶಾನದಲ್ಲೇ ಅರ್ಜಿದಾರರು ಮತ್ತು ಅವರ ಸಂಬಂಧಿಗಳು ಅಂತಿಮ ವಿಧಿ ವಿಧಾನವನ್ನು ನೆರವೇರಿಸಲು ಅವಕಾಶಮಾಡಿಕೊಡಬೇಕು” ಎಂದು ನ್ಯಾಯಾಲಯ ಹೇಳಿತು.

ದೇಹ ಕೊಳೆತಿದ್ದು ಹಸ್ತಾಂತರಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಮಗನ ಮೃತದೇಹ ಪಡೆಯುವ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಸರ್ಕಾರ ಅರ್ಜಿದಾರರಿಗೆ  5 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ನವೆಂಬರ್ 15, 2021ರಂದು ಹೈದರ್ ಪೋರದಲ್ಲಿ ಪೊಲೀಸರು ಮತ್ತು ಭದ್ರತಾಪಡೆಗಳಿಂದ ನಾಲ್ವರು ಹತ್ಯೆಗೀಡಾದರು. ಅವರಲ್ಲಿ ಕೆಲವರು ಮುಗ್ಧ ನಾಗರಿಕರು ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಘಟನೆಯಲ್ಲಿ ಮೃತಪಟ್ಟ ಡಾ. ಮುದಸ್ಸಿರ್ ಗುಲ್ ಮತ್ತು ಅಲ್ತಾಫ್ ಭಟ್ ಅವರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದರೂ ಅಮೀರ್ ಪಾರ್ಥಿವ ಶರೀರವನ್ನು ತಮಗೆ ನೀಡಿರಲಿಲ್ಲ ಎಂದು ಅವರ ತಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

(ಕೃಪೆ: ಬಾರ್ & ಬೆಂಚ್)

Join Whatsapp