► ಹಿಂದಿನ ಸರ್ಕಾರದ ಯೋಜನೆಯನ್ನು ಉದ್ಘಾಟಿಸಿದ್ದೇ ಮೋದಿ ಸಾಧನೆ
ಶ್ರೀನಗರ, ಆ.4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ರಾಜ್ಯಕ್ಕೆ ಯಾವುದೇ ಹೊಸ ಹೂಡಿಕೆಯಾಗಲಿ, ಅಭಿವೃದ್ಧಿ ಯೋಜನೆಯಾಗಲೀ ಬಂದಿಲ್ಲ. ಈ ಹಿಂದಿನ ಸರ್ಕಾರ ಆರಂಭಿಸಿದ್ದ ಯೋಜನೆಗಳನ್ನು ಉದ್ಘಾಟಿಸಿದ್ದೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಹೂಡಿಕೆಯಾಗಲೀ, ಅಭಿವೃದ್ಧಿ ಯೋಜನೆಯಾಗಲಿ ಬಂದಿಲ್ಲ. ರಸ್ತೆ, ಸೇತುವೆ, ವಿದ್ಯುತ್ ಘಟಕ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಇವೆಲ್ಲವೂ ಹಿಂದಿನ ಸರ್ಕಾರಗಳು ಮಾಡಿದ ಸಾಧನೆಗಳು. ಹಿಂದಿನ ಸರ್ಕಾರಗಳು ಆರಂಭಿಸಿದ ಅಭಿವೃದ್ಧಿ ಯೋಜನೆಗಳನ್ನು ಈಗಿನ ಪ್ರಧಾನಿ ಮೋದಿ ಕೇವಲ ಉದ್ಘಾಟಿಸುತ್ತಿದ್ದಾರೆ ಎಂದು ಹೇಳಿದರು.
ಜನರ ಸಾಮಾನ್ಯ ಜೀವಿತಾವಧಿ ವಿಷಯದಲ್ಲಿ ಯುಪಿ ಕೊನೆಯ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ, ವೈದ್ಯರ ಸಂಖ್ಯೆಯಲ್ಲಿ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ. ಬಡತನ ನಿರ್ಮೂಲನೆಯಲ್ಲಿ ಜಮ್ಮು-ಕಾಶ್ಮೀರ ಮುಂಚೂಣಿಯಲ್ಲಿದೆ. ಇವೆಲ್ಲವೂ ಕಳೆದ ಎರಡು ವರ್ಷಗಳಿಂದ ಉಂಟಾದುದಲ್ಲ. ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಶಿಶು ಮರಣ ಪ್ರಮಾಣದಲ್ಲಿ ನಮ್ಮ ರಾಜ್ಯ 10ನೇ ಸ್ಥಾನದಲ್ಲಿದೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್, ಆಂಧ್ರಪ್ರದೇಶಗಳಿಂತ ಮುಂದೆ ಇದ್ದೇವೆ ಎಂದು ಉಮರ್ ಅಬ್ದುಲ್ಲಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜೈಲಿಗೆ ಹಾಕಿದ ಆರಂಭದಲ್ಲಿ ನಾನು ತೀವ್ರ ವಿಚಲಿತನಾಗಿದ್ದೆ, ಆದರೆ ಕ್ರಮೇಣ ಒಬ್ಬ ರಾಜಕಾರಣಿಯಾಗಿ “ದುಃಖಿ”ಸುವ ಹಕ್ಕು ತನಗಿಲ್ಲ. ಮೂಲಭೂತ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವವರು ಯಾವತ್ತೂ ವಿಚಲಿತರಾಗಬಾರದು ಮತ್ತು ದೀರ್ಘ ಕಾಲದ ಬಂಧನ ನಮ್ಮನ್ನು ನಿರಾಶೆಗೊಳಿಸಬಾರದು ಎಂಬ ಸತ್ಯವನ್ನು ಅರಿತುಕೊಂಡೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಹೇಳಿದರು.
ಆಗಸ್ಟ್ 5 ರಂದು ಕೇಂದ್ರದ ತೀರ್ಮಾನ ಆಘಾತಕಾರಿಯಾಗಿತ್ತು. “ಹಠಾತ್, ಅನಿರೀಕ್ಷಿತ ಮತ್ತು ಅಸಂವಿಧಾನಿಕ ದಾಳಿ” ಯಿಂದ ಜಮ್ಮು-ಕಾಶ್ಮೀರದ ಹೆಚ್ಚಿನ ಜನರು ಬಾಧಿತರಾದರು ಎಂದು ಹೇಳಿದರು. ಏಳು ತಿಂಗಳು ಜೈಲು ವಾಸವನ್ನು ಸ್ಮರಿಸಿದ ಅಬ್ದುಲ್ಲಾ, “ನಾನು ತೀವ್ರ ಅಸಮಾಧಾನಗೊಂಡ ಮತ್ತು ನಿರಾಶೆಗೊಂಡ ವ್ಯಕ್ತಿಯಾಗಿದ್ದೆ. ಆದರೆ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಮೂಲಭೂತ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತನ್ನನ್ನು ನಾನು ಪ್ರೇರೇಪಿಸಿಕೊಳ್ಳಲು ಸಹ ನನಗೆ ಅಸಾಧ್ಯವಾಗಿತ್ತು. ಆದರೆ ‘ನಿಮಗೆ ಕಾಮಲುಬಿಲ್ಲು ಬೇಕಾದರೆ ನೀವು ಮಳೆಯನ್ನು ಸಹಿಸಿಕೊಳ್ಳಲೇಬೇಕು” ಎಂಬ ಮಾತಿನಂತೆ ನಾನು ಇವೆಲ್ಲವನ್ನೂ ಸಹಿಸಿಕೊಳ್ಳಲು ನಿರ್ಧರಿಸಿದೆ. ನನ್ನ ಜನರಿಗೆ ಏನನ್ನಾದರೂ ಮಾಡಲು ನಿರ್ಧರಿಸಿದೆ ಎಂದು ಜೈಲಿನಲ್ಲಿದ್ದಾಗ ಅನುಭವಿಸಿದ ಮನಸ್ಸಿನ ತೊಳಲಾಟವನ್ನು ಉಮರ್ ವಿವರಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ನ (ಎನ್ ಸಿ) ಕಾರ್ಯಕರ್ತರು ಮತ್ತು ನಾಯಕರು ಜಮ್ಮು ಮತ್ತು ಕಾಶ್ಮೀರದ ಜನರಿಗಾಗಿ ಅಪಾರ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. ನಮ್ಮ ನೂರಾರು ಕಾರ್ಯಕರ್ತರು ಮತ್ತು ನಾಯಕರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ನನ್ನ ಏಕಾಂತವಾಸದ ಸಮಯದಲ್ಲಿ ನನ್ನೊಳಗಿನ ಒಂದು ನಿರ್ದಿಷ್ಟ ಬೆಳಕು ಮಸುಕಾದಾಗ ನಾನು ಇದನ್ನೆಲ್ಲ ಯೋಚಿಸಿದೆ. ಇವೆಲ್ಲವುಗಳಿಂದ ನಾನು ದೂರ ಓಡಿ ಹೋಗಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ ಎಂದು ಅವರು ತಿಳಿಸಿದ್ದಾರೆ.
ಆರ್ಟಿಕಲ್ 370 ರದ್ದು ಸಂವಿಧಾನ ಬಾಹಿರ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ. ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಭರವಸೆ ಮತ್ತು ನಂಬಿಕೆ ಇದೆ. ಒಂದು ದಿನ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಎನ್ ಸಿ ಉಪಾಧ್ಯಕ್ಷ ಉಮರ್ ಹೇಳಿದರು.
ಜೂನ್ 24 ರಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಯ ನಾಯಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿಯ ಕುರಿತು ಮಾತನಾಡಿದ ಅಬ್ದುಲ್ಲಾ, ಅರ್ಥಪೂರ್ಣ ಫಲಿತಾಂಶಗಳನ್ನು ಪಡೆಯಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವಿನ ದೈಹಿಕ ಮತ್ತು ಮಾನಸಿಕ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದ್ದಾರೆ. ಅದರ ಅನುಷ್ಠಾನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದರು.
ಅಭಿವೃದ್ಧಿಯ ಬಗ್ಗೆ ತುಂಬಾ ಚರ್ಚೆ ಇದೆ. ಇದು ನಿಜವಾಗಿದ್ದರೆ ನಾವು ಸ್ವಾಗತಿಸುತ್ತೇವೆ. ಚುನಾಯಿತ ಸರ್ಕಾರಗಳ ಸಮಯದಲ್ಲಿ ಕೆಲಸ ಆರಂಭಿಸಿದ ಯೋಜನೆಗಳನ್ನು ಉದ್ಘಾಟಿಸುವುದನ್ನು ಆಡಳಿತವು ಮೀರಿ ಹೋಗಬೇಕು ಎಂದು ಎನ್. ಸಿ. ನಾಯಕ ಉಮರ್ ಅಬ್ದುಲ್ಲಾ ಹೇಳಿದರು.