ಕಾಶಿಯ ಗ್ಯಾನ್ ವಾಪಿ ಮಸೀದಿಯ ಪುರಾತತ್ವ ಸಮೀಕ್ಷೆ ನಡೆಸಲು ಅರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾಗೆ ನಿರ್ದೇಶನ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧದ ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಹೇಳಿದ್ದಾರೆ.
ಆರಾಧನಾಲಯಗಳ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರುತ್ತದೆ ಎಂದು ‘ಆರಾಧನಾಲಯಗಳ (ವಿಶೇಷ ನಿಬಂಧನೆಗಳು) ಕಾಯ್ದೆ’ ಘೋಷಿಸುತ್ತದೆ ಎಂದು ಅವರು ಪುನರುಚ್ಚರಿಸಿದರು. ಇದರ ಪ್ರಕಾರ, ಒಂದು ಧರ್ಮದ ಆರಾಧನಾಲಯವನ್ನು ಮತ್ತೊಂದು ಧರ್ಮದ ಆರಾಧನಾಲಯವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಆಗಸ್ಟ್ 15, 1947 ರಿಂದ ಜಾರಿಗೆ ಬಂದ ಈ ಕಾಯ್ದೆಯನ್ನು ತಡೆಹಿಡಿಯಲು ಹಾಕಿದ ಎಲ್ಲಾ ಮೇಲ್ಮನವಿಗಳು ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ಅಮಾನ್ಯಗೊಂಡಿದೆ. ಆದ್ದರಿಂದ ದೇಶದ ಯಾವುದೇ ಆರಾಧನಾಲಯಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಇಲ್ಯಾಸ್ ಮೊಹಮ್ಮದ್ ತುಂಬೆ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಧ್ರುವೀಕರಿಸಲು ಮತ್ತು ಸರ್ಕಾರದ ಗಂಭೀರ ವೈಫಲ್ಯಗಳನ್ನು ಮುಚ್ಚಿಡಲು ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳು ‘ಅಯೋಧ್ಯೆ ಸಮಸ್ಯೆ’ಯಂತೆ ಕೋಮು ಭಾವನೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು. ಈ ಘೋರ ಪಿತೂರಿ ದೇಶದ ವಿನಾಶ ಮತ್ತು ಅಶಾಂತಿಗೆ ಕಾರಣವಾಗಲಿದೆ ಮತ್ತು ಇದು ದೇಶದ ಘನತೆ ಮತ್ತು ಗೌರವಕ್ಕೆ ಹಾನಿಕಾರಕವಾಗಿದೆ ಎಂದು ಅವರು ಎಚ್ಚರಿಸಿದರು.