ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2020, 2021 ಹಾಗೂ 2022 ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಜೊತೆಗೆ 2022ನೆಯ ಸಾಲಿನ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್.ಇಂದಿರಾ ದತ್ತಿʼ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020ನೇ ಸಾಲಿನ ʻಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿʼ ಪ್ರಶಸ್ತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ʻಶೀ ಬಸವರಾಜ ಪಾಟೀಲ ಸೇಡಂʼ ಅವರು ಆಯ್ಕೆಯಾಗಿದ್ದಾರೆ. 2021 ನೇ ಸಾಲಿನ ಪ್ರಶಸ್ತಿಗಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಬೆಂಗಳೂರಿನ ʻಸಂಧ್ಯಾ ದೀಪ ಸಂಸ್ಥೆʼ ಆಯ್ಕೆಯಾಗಿದೆ. 2022ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆಮಾಡುತ್ತಿರುವ ʻಧಾರವಾಡದ ಶ್ರೀ ಬಸವರಾಜ ಸಾದರʼ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದ ʻಡಾ. ಎಚ್. ವಿಶ್ವನಾಥ್ ಮತ್ತು ಎಂ.ಎಸ್. ಇಂದಿರಾ ದತ್ತಿʼ ಪ್ರಶಸ್ತಿಯನ್ನು 2022ನೇ ಸಾಲಿನ ಪ್ರಶಸ್ತಿಗೆ ʻಬೆಳ್ಳಿ ಸೀಮೆಯ ರೈಲ್ವೆ ಸ್ಟೇಷನ್ʼ ಎನ್ನುವ ಕಾದಂಬರಿ ರಚಿಸಿದ ಲೇಖಕಿ ʻಉಡುಪಿಯ ಸೌಮ್ಯ ಪುತ್ರನ್ʼ ಅವರು ಆಯ್ಕೆಯಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಸ್ತುತ ದತ್ತಿ ಪ್ರಶಸ್ತಿಗಳ ಆಯ್ಕೆಯಾಯಾಗಿರುವ ಎಲ್ಲಾ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿ ಅವರ ಸಾಹಿತ್ಯ ಸೇವೆ ಹಾಗೂ ಸಮಾಜ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡಿರುವ ಗಣ್ಯರನ್ನು ಸೂಕ್ಷ್ಮವಾಗಿ ಗುರುತಿಸಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ಡಾ.ಎಚ್.ವಿಶ್ವನಾಥ್ ಬೆಂಗಳೂರು, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.