ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಫೈನಲ್ ಪ್ರವೇಶಿಸಿದ ಕರ್ನಾಟಕ

Prasthutha|

ನವದೆಹಲಿ: ಸಯ್ಯದ್ ಮುಷ್ತಾಕ್ ಅಲಿ T-20 ಟೂರ್ನಿಯಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು ಫೈನಲ್ ಪ್ರವೆಶಿಸಿದೆ. ನವದೆಹಲಿಯಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ 4 ರನ್’ಗಳ ಅಂತರದಲ್ಲಿ ರೋಚಕ ಜಯಗಳಿಸುವ ಮೂಲಕ ಕರ್ನಾಟಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

- Advertisement -

ಫೈನಲ್ ಹಣಾಹಣಿಯಲ್ಲಿ ಕರ್ನಾಟಕ, ನೆರೆಯ ತಮಿಳುನಾಡು ತಂಡದ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಮೊದಲ ಸೆಮಿಫೈನ್‌ನಲ್ಲಿ ಹೈದ್ರಾಬಾದ್ ತಂಡವನ್ನ 90ರನ್‌ಗೆ ಆಲೌಟ್ ಮಾಡಿದ್ದ ತಮಿಳುನಾಡು, 14.2 ಓವರ್‌ಗಳಲ್ಲಿ ಗುರಿ ಮುಟ್ಟಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಕರ್ನಾಟಕ ನೀಡಿದ್ದ 177 ರನ್’ಗಳ ಗುರಿ ಮುಟ್ಟಲು ವಿದರ್ಭ ತಂಡವು ಕೊನೆಯ ಓವರ್‌’ವರೆಗೂ ಹೋರಾಟ ನಡೆಸಿತಾದರೂ 4 ರನ್’ಗಳ ಅಂತರದಲ್ಲಿ ವಿರೋಚಿತವಾಗಿಯೇ ಸೋಲನ್ನು ಕಂಡಿತು. ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ವಿದರ್ಭ, ಮನೀಷ್ ಪಾಂಡೆ ಪಡೆಯ ಎದುರು ಮಂಡಿಯೂರಿತು. ವಿದರ್ಭ ಗೆಲುವಿಗೆ ಅಂತಿಮ ಓವರ್’ನಲ್ಲಿ 13 ರನ್’ಗಳ ಅಗತ್ಯವಿತ್ತು. ಆದರೆ 9 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದ ವಿಧ್ಯಾದರ್ ಪಾಟೀಲ್ ಕರ್ನಾಟಕಕ್ಕೆ ಸ್ಮರಣೀಯ ಗೆಲುವು ತಂದಿತ್ತರು.

- Advertisement -

ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟಿದ್ದ ಕರ್ನಾಟಕಕ್ಕೆ ರೋಹನ್ ಕದಂ ಹಾಗೂ ನಾಯಕ ಮನೀಷ್ ಪಾಂಡೆ ಭರ್ಜರಿ ಆರಂಭ ಒದಗಿಸಿದ್ದರು. 4 ರನ್‌ಗಳಿಸಿದ್ದ ವೇಳೆ ವಿದರ್ಭ ನಾಯಕ ಅಕ್ಷಯ್ ವಾಡ್ಕರ್ ಕೈ ಚೆಲ್ಲಿದ ಕ್ಯಾಚ್‌ನಿಂದಾಗಿ ದೊರೆತ ಜೀವದಾನದ ಲಾಭ ಪಡೆದ ರೋಹನ್ ಕದಂ, 4 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 87 ರನ್ ಹಾಗೂ ನಾಯಕ ಮನೀಷ್ ಪಾಂಡೆ 3 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ  54 ರನ್’ಗಳಿಸಿ ಔಟಾದರು.

ಮೂರನೇ ಕ್ರಮಾಂಕದಲ್ಲಿ ಬಂದ ಅಭಿನವ್ ಮನೋಹರ್ 27 ರನ್’ಗಳಿಸಿದರು. ಆದರೆ ಬಳಿಕ ಕ್ರೀಸ್’ಗಿಳಿದ ಬ್ಯಾಟರ್ ಬಂದಷ್ಟೇ ವೇಗದಲ್ಲಿ ಮರಳಿದ ಪರಿಣಾಮ ಕರ್ನಾಟಕ ಕೊನೇಯ ಓವರ್’ಗಳಲ್ಲಿ ರನ್’ಗಳಿಸಲು ಪರದಾಡಿತು. 132 ರನ್’ವರೆಗೂ ವಿಕೆಟ್ ಕಳೆದುಕೊಳ್ಳದೇ ಆಡಿದ್ದ ಕರ್ನಾಟಕ 20 ಓವರ್’ಗಳಲ್ಲಿ 176ರನ್’ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ದರ್ಶನ್ ನಲ್ಕಂಡೆ, ಸತತ 4ಎಸೆತಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಅಮೋಘ ಪ್ರದರ್ಶನ ನೀಡಿದರು.



Join Whatsapp