ಶನಿವಾರಸಂತೆಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ : ಮುಸ್ಲಿಮರನ್ನು ದೇಶದ್ರೋಹಿಗಳನ್ನಾಗಿ ಚಿತ್ರಿಸುವ ಸಂಘೀ ಷಡ್ಯಂತ್ರದ ಮುಂದುವರಿದ ಭಾಗ : ಪಾಪ್ಯುಲರ್ ಫ್ರಂಟ್

Prasthutha|

ಮಡಿಕೇರಿ: ಕೊಡಗಿನ ಶನಿವಾರಸಂತೆಯಲ್ಲಿ ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಪ್ರಸಾರ ಮಾಡಿರುವುದು, ಮುಸ್ಲಿಮರನ್ನು ದೇಶದ್ರೋಹಿಗಳನ್ನಾಗಿ ಚಿತ್ರಿಸುವ ಸಂಘೀ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಸಂಘಪರಿವಾರದಿಂದ ದಾಳಿಗೊಳಗಾದ ಮುಸ್ಲಿಮ್ ಯುವಕನ ಕುಟುಂಬವು ದೂರು ನೀಡಿದರೂ, ಪೊಲೀಸರು ಅದನ್ನು ದಾಖಲಿಸಿಲ್ಲ. ದೂರು ನೀಡಲು ತೆರಳಿದ ಮುಸ್ಲಿಮ್ ಮಹಿಳೆಯರನ್ನು ಸತಾಯಿಸಿದ್ದು ಮಾತ್ರವಲ್ಲ, ದುಷ್ಕರ್ಮಿಗಳ ಪರವಾಗಿ ಮೃದು ಧೋರಣೆ ತಾಳಿದ್ದಾರೆ. ಪೊಲೀಸರ ಈ ತಾರತಮ್ಯ ನೀತಿಯನ್ನು ಖಂಡಿಸಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಗಲಭೆ ಹರಡುವ ದುರುದ್ದೇಶದಿಂದ ಓರ್ವ ಪತ್ರಕರ್ತ ಸಹಿತ ಸಂಘಪರಿವಾರದ ಕಾರ್ಯಕರ್ತರು ಘೋಷಣೆಯನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದಾರೆ. ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರು ಈ ಕಿಡಿಗೇಡಿ ಕೃತ್ಯ ನಡೆಸಿರುವುದು ಇದು ಮೊದಲೇನಲ್ಲ. ಉಜಿರೆಯಲ್ಲಿ ಎಸ್.ಡಿ.ಪಿ.ಐ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಬಿಜೆಪಿ ಕಾರ್ಯಕರ್ತರು ವಿಕೃತಿ ಮೆರೆದಿದ್ದರು. ಇದಕ್ಕೂ ಮೊದಲು ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು. ಇಂತಹ ದುಷ್ಕೃತ್ಯಗಳ ಮೂಲಕ ಮುಸ್ಲಿಮರನ್ನು ದೇಶದ್ರೋಹಿಗಳನ್ನಾಗಿ ಚಿತ್ರೀಕರಿಸಲು ವ್ಯವಸ್ಥಿತ ಪಿತೂರಿಗಳನ್ನು ನಡೆಸಲಾಗುತ್ತಿದೆ.

ಈ ಹಿಂದೆ, ಪೊಲೀಸರ ಪೂರ್ವಾಗ್ರಹಪೀಡಿತ ತನಿಖೆ ಮೂಲಕ ಹಲವು ಅಮಾಯಕ ಮುಸ್ಲಿಮ್ ಯುವಕರನ್ನು ವಿನಾ ಕಾರಣ ಬಂಧಿಸಿ ಜೈಲಿಗಟ್ಟಲಾಗಿತ್ತು. ಇದೀಗ ಮುಸ್ಲಿಮ್ ಸಂಘಟನೆಗಳ ಒತ್ತಡದ ಕಾರಣ ಪೊಲೀಸರು ನಿಷ್ಪಕ್ಷಪಾತ ಹಾಗೂ ಕೂಲಂಕಷ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಪೊಲೀಸರು ಈ ರೀತಿಯ ಸೂಕ್ಷ್ಮ ಘಟನೆಗಳನ್ನು ಗಂಭೀರವಾಗಿ ಪರಿಶೀಲಿಸಿ ನೈಜ ಅಪರಾಧಿಗಳನ್ನು ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಗಮನಹರಿಸಬೇಕು. ಶಾಂತಿ ಕದಡಿ ಗಲಭೆ ಹರಡುವ ದುಷ್ಕರ್ಮಿಗಳ ವಿರುದ್ಧ ಸರಕಾರವೂ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಹಾಗೆಯೇ ಸಂತ್ರಸ್ತ ಕುಟುಂಬ ನೀಡಿದ ದೂರು ದಾಖಲಿಸದೇ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಕೂಡಲೇ ಅಮಾನತುಪಡಿಸಬೇಕೆಂದು ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

Join Whatsapp