ಕರ್ನಾಟಕ ಪ್ರಜ್ಞಾವಂತರ ನಾಡು, ಜಾತಿ ದೌರ್ಜನ್ಯಗಳಿಗೆ ಕಡಿವಾಣ ಅತ್ಯಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜ‌ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು.

- Advertisement -

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 3 ಗಂಟೆಗಳ ಕಾಲ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಬಳಿಕ ಅಧಿಕಾರಿ ವರ್ಗಕ್ಕೆ ಈ ಸೂಚನೆ ನೀಡಿದರು. 

ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣದಿಂದ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ,  ನಾಗರಿಕ ಹಕ್ಕು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಈ ಕಾಯ್ದೆಗೆ ಹೆಚ್ಚಿನ‌ ಮಹತ್ವ ನೀಡಿ ಗಂಭೀರವಾಗಿ ಪರಿಗಣಿಸುತ್ತದೆ. ಸಂತ್ರಸ್ತರಿಗೆ ರಕ್ಷಣೆ ಸಿಗಬೇಕು. ಈ ಉದ್ದೇಶ ಸಫಲವಾಗಲು ಸಮಾಜ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಪ್ರಾಸಿಕ್ಯೂಷನ್‌ ಇಲಾಖೆ, ಕಂದಾಯ ಇಲಾಖೆ ಸಮನ್ವಯದೊಂದಿಗೆ ಕೆಲಸ ಮಾಡಬೇಕು.

- Advertisement -

ಸಮನ್ವಯ ಇದ್ದಾಗ ಮಾತ್ರ ವ್ಯವಸ್ಥಿತವಾಗಿ ಈ ವರ್ಗದ ಜನರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದರು.

 ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎರಡು ತಿಂಗಳೊಳಗೆ ಚಾರ್ಜ್‌ ಶೀಟ್‌ ಹಾಕುವ ಬಗ್ಗೆ ಎಸ್‌.ಪಿ. ಗಳಿಗೆ, ಡಿಸಿಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪೊಲೀಸರು ಜಾಗರೂಕತೆಯಿಂದ ತನಿಖೆ ಮಾಡಬೇಕು. ಇವುಗಳನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಶಿಕ್ಷೆ ಕೊಡಿಸಲು ಎಲ್ಲ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಶೇ. 3.44 ರಷ್ಟಿರುವುದು ನಾಚಿಕೆಯ ಸಂಗತಿ. ಇದನ್ನು ಇನ್ನಷ್ಟು ಹೆಚ್ಚಿಸುವಂತೆ ಸೂಚಿಸಿದರು. ಪ್ರಜ್ಞಾವಂತ ಸಮಾಜವಿರುವ ನಮ್ಮ ರಾಜ್ಯದಲ್ಲಿ ಇಷ್ಟು ಕಡಿಮೆ ಇರುವುದು ತಲೆ ತಗ್ಗಿಸುವ ವಿಚಾರ.

ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಇದರ ಪ್ರಗತಿ ಪರಿಶೀಲನೆ ಮಾಡಬೇಕು. ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ, ಡಿ.ಜಿ.ಪಿ. ಅವರಿಗೆ ವರದಿ ಕಳುಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ತಾಲ್ಲೂಕು, ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಈ ವಿಷಯದ ಕುರಿತು ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ಆಗಬೇಕು. ಚಾರ್ಜ್‌ ಶೀಟ್‌ ಸಲ್ಲಿಕೆಯನ್ನು ಯಾವುದೇ ಕಾರಣಕ್ಕೆ ವಿಳಂಬ ಮಾಡಬಾರದು. ಸಾಕ್ಷ್ಯ ವಿಫಲ ಆಗದಂತೆ ಪೊಲೀಸರು ಹೆಚ್ಚಿನ ಗಮನ ಕೊಡಬೇಕು.

ರಾಜಕಾರಣಿಗಳು ಈ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸದೆ ಪೊಲೀಸರಿಗೆ ಸಹಕಾರ ನೀಡಬೇಕು. ಪ್ರತಿ ಪ್ರಕರಣ ದಾಖಲಿಸುವಾಗ ಪೊಲೀಸರು ತಮ್ಮ ವಿವೇಚನೆಯನ್ನು ಬಳಸಬೇಕು. ಚಾರ್ಜ್‌ ಶೀಟ್‌ ಸಲ್ಲಿಕೆ ವಿಳಂಬವಾದರೆ ಆರೋಪಿಗಳು ಜಾಮೀನು ಪಡೆದು ಹೊರಬಂದು ಮತ್ತೊಮ್ಮೆ ಅಪರಾಧ ಎಸಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಮುಂದಿನ ಸಭೆಯಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳ ಅವಧಿ ಮತ್ತು ಇತರ ಮಾಹಿತಿಯನ್ನು ಒದಗಿಸಬೇಕು. ಹೆಚ್ಚು ಪ್ರಕರಣಗಳು ಬಾಕಿ ಇರುವಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಅನುಕಂಪ ಆಧಾರದ ಉದ್ಯೋಗ ನೀಡುವುದರಲ್ಲಿ 54 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಎರಡು ವರ್ಷದೊಳಗೆ ಅರ್ಜಿ ಸಲ್ಲಿಸಬೇಕೆಂಬ ಷರತ್ತಿನ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ಬಾರಿ ಆಯವ್ಯಯದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವನ್ನು ಬಲಪಡಿಸುವ ಬಗ್ಗೆ ಸಮಾಜ ಕಲ್ಯಾಣ ಹಾಗೂ ಗೃಹ ಸಚಿವರು ನನ್ನೊಂದಿಗೆ ಚರ್ಚಿಸಿದ್ದಾರೆ. ಇದನ್ನು ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಸಚಿವರಿಗೆ ಸೂಚಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯಲಾಗುವುದು.

ಕಾನೂನು ಬಾಹಿರವಾಗಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಯಮಕ್ಕೆ ತಿದ್ದುಪಡಿ ಮಾಡಿ ಈ ಸಮುದಾಯಗಳ ಎಲ್ಲ ಸಚಿವರು, ಸಂಸದರು, ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಈ ದೌರ್ಜನ್ಯ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರಿಗಳು ತಮ್ಮ ಧೋರಣೆಯನ್ನು ಬದಲಿಸಿಕೊಂಡು ಕಾರ್ಯನಿರ್ವಹಿಸಬೇಕು. ಆರು ತಿಂಗಳಿಗೊಮ್ಮೆ ಈ ಸಭೆ ಕರೆಯುವಂತೆ ತಿಳಿಸಿದರು.

ಸಭೆಯಲ್ಲಿ‌ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌.ಸಿ. ಮಹಾದೇವಪ್ಪ ಹಾಗೂ ಸಚಿವರಾದ ಡಾ. ಜಿ. ಪರಮೇಶ್ವರ, ಕೆ.ಹೆಚ್. ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಆರ್.ಬಿ. ತಿಮ್ಮಾಪೂರ, ಕೆ.ಎನ್. ರಾಜಣ್ಣ, ನಾಗೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳ ಶಾಸಕರು, ಸಂಸದರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

CRE ಸೆಲ್ ಗೆ ಹೆಚ್ಚಿನ ಬಲ

ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (CRE cell) ಬಲ ಪಡಿಸುವ ಕುರಿತು ವರದಿ ಸಿದ್ಧಪಡಿಸಲಾಗಿದ್ದು, ಕಡತವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಸಮಾಜ ಕಲ್ಯಾಣ ಸಚಿವರು ಸಭೆಯಲ್ಲಿ ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ 53 ಕೊಲೆ ಪ್ರಕರಣಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕದಿರುವ ಕುರಿತು ಆಕ್ಷೇಪಿಸಿದ ಮುಖ್ಯಮಂತ್ರಿಗಳು, ಅಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದರು.



Join Whatsapp