ಕರ್ನಾಟಕ ಹಿಜಾಬ್ ವಿಚಾರದಲ್ಲಿ ಕೋಮು ಆಧಾರಿತ ಚರ್ಚೆ: ನ್ಯೂಸ್ 18 ಚಾನೆಲ್’ಗೆ 50 ಸಾವಿರ ರೂ. ದಂಡ

Prasthutha|

ಬೆಂಗಳೂರು: ಕರ್ನಾಟಕದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ನಿಷ್ಪಕ್ಷಪಾತ, ತಟಸ್ಥತೆ, ನ್ಯಾಯಸಮ್ಮತ ಮತ್ತು ಉತ್ತಮ ಅಭಿರುಚಿಗೆ ಸಂಬಂಧಿಸಿದ ತತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯೂಸ್ 18 ಸುದ್ದಿವಾಹಿನಿಗೆ ನ್ಯೂಸ್ ಬ್ರಾಡ್’ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) 50 ಸಾವಿರ ರೂ. ದಂಡ ವಿಧಿಸಿದೆ.

- Advertisement -

ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್’ನ ಆದೇಶದ ಬಳಿಕ ಈ ವಿಷಯದ ಕುರಿತು ಚರ್ಚೆ ನಡೆಸಲು ಸುದ್ದಿವಾಹಿನಿಯ ಪ್ರಸಾರಕರು ಅರ್ಹತೆ ಹೊಂದಿದ್ದರೂ, ಕಾರ್ಯಕ್ರಮದಲ್ಲಿ ಮಾಡಿದ ನಿರೂಪಣೆ ಕ್ರಮಬದ್ಧವಾಗಿಲ್ಲ ಎಂದು ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಬೇಕೆ ಅಥವಾ ಬೇಡವೇ ಎಂಬ ಚರ್ಚೆಯ ಸಂದರ್ಭದಲ್ಲಿ ಅದನ್ನು ಕೋಮು ವಿಷಯವಾಗಿ ಪರಿವರ್ತಿಸುವ ಮೂಲಕ ಚರ್ಚೆಯನ್ನು ಸಂಘರ್ಷಾತ್ಮಕವಾಗಿ ಕೊಂಡೊಯ್ಯಲಾಗಿತ್ತು ಎಂಬ ಸತ್ಯವನ್ನು NBDSA ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಏಪ್ರಿಲ್ 6ರಂದು ನ್ಯೂಸ್ 18 ನಲ್ಲಿ ಪ್ರಸಾರವಾದ ಕಾರ್ಯಕ್ರಮದ ವಿರುದ್ಧ ಇಂದ್ರಜೀತ್ ಘೋರ್ಪಡೆ ಎಂಬವರು ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶವನ್ನು ನೀಡಲಾಗಿದೆ. ಇದರಲ್ಲಿ ನಿರೂಪಕ ಅಮನ್ ಚೋಪ್ರಾ ಅವರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು “ಹಿಜಾಬ್ ಗ್ಯಾಂಗ್”, “ಹಿಜಾಬ್ ವಾಲಿ ಗಝ್ವಾ” ಎಂದು ಅವಹೇಳನಗೈದಿದ್ದರು. ಈ ಮೂಲಕ ಅವರು ಗಲಭೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅಲ್ ಖೈದಾ ಮುಖ್ಯಸ್ಥ ಜವಾಹಿರಿ ಎಂಬಾತ ಹಿಜಾಬ್ ನ ಹಿಂದಿನ ರೂವಾರಿ ಮತ್ತು ವಿದ್ಯಾರ್ಥಿನಿಯರು ಆತನ ಸೂತ್ರದಾರರು ಎಂದು ಚೋಪ್ರಾ ಯಾವುದೇ ಸಾಕ್ಷ್ಯವಿಲ್ಲದೇ ನೇರವಾಗಿ ಆರೋಪಿಸಿದ್ದರು.
ಸಮಸ್ಯೆಯನ್ನು ಪರಿಶೀಲಿಸಿದಾಗ, ಇದನ್ನು ಕೋಮು ವಿಷಯವಾಗಿ ಮಾಡುವ ಮೂಲಕ ಚರ್ಚೆಯನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿತ್ತು ಎಂದು NBDSA ಹೇಳಿದೆ.

“ಜವಾಹಿರಿಯೊಂದಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ಬೆಂಬಲಿಸುವ ಮತ್ತು ಅವರನ್ನು ‘ಜವಾಹಿರಿ ಗ್ಯಾಂಗ್ ಸದಸ್ಯರು’, ‘ಜವಾಹಿರಿಯ ರಾಯಭಾರಿ’, ‘ಜವಾಹಿರಿ ನಿಮ್ಮ ದೇವರು, ನೀವು ಅವರ ಅಭಿಮಾನಿ’ ಎಂದು ಲೇಬಲ್ ಮಾಡುವ ವಾಹಿನಿಯ ಪ್ರವೃತ್ತಿಯನ್ನು ಬಲವಾಗಿ ಖಂಡಿಸುತ್ತದೆ” ಎಂದು NBDSA ತಿಳಿಸಿದೆ.

ಕಾರ್ಯಕ್ರಮದ ವೀಡಿಯೊಗಳನ್ನು ಏಳು ದಿನಗಳೊಳಗೆ ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲು ಆದೇಶದಲ್ಲಿ ಸೂಚಿಸಲಾಗಿದೆ.

Join Whatsapp