ಜಿಂದಾಲ್ ಗೆ ಭೂಮಿ ನಿರ್ಧಾರ ವಾಪಾಸ್ : ವಿರೋಧಕ್ಕೆ ಮಣಿದ ರಾಜ್ಯ ಬಿಜೆಪಿ ಸರ್ಕಾರ

Prasthutha|

ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಮುಂದಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ವಿರೋಧ ಹೆಚ್ಚಾಗುತ್ತಿದ್ದಂತೆ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೊಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಂದಾಲ್ ಸಂಸ್ಥೆಗೆ ಜಮೀನು ನೀಡುವುದು ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಈ ಸಂಪುಟ ಒಪ್ಪಿಗೆ ನೀಡಿಲ್ಲ. ಜಿಂದಾಲ್ ಗೆ ಜಮೀನು ನೀಡುವ ವಿಷಯ ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಗೊತ್ತಿಲ್ಲ. ಜಿಂದಾಲ್ ಕುರಿತು ಹೈಕೋರ್ಟ್ ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್ ನಲ್ಲಿಯೂ ಪ್ರಕರಣ ಇದೆ. ಈಗ ಪಿಐಎಲ್ ಆಧಾರದಲ್ಲಿ  ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಏನು ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

- Advertisement -

ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿಯನ್ನು ಸರ್ಕಾರ ಇತ್ತೀಚೆಗೆ ಹಸ್ತಾಂತರ ಮಾಡಲು ಮುಂದಾಗಿತ್ತು. ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಂದಾಲ್ ಕಂಪೆನಿಗೆ 3677 ಎಕರೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿದ್ದರು. ಈ ನಡೆಯನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಏರಿದ ತಕ್ಷಣ ಸದ್ದಿಲ್ಲದೆ ಜಿಂದಾಲ್ ಗೆ 3677 ಎಕರೆ ಭೂಮಿ ನೀಡಲು ಮುಂದಾಗಿದ್ದರು. ಇದನ್ನು ಕುಮಾರಸ್ವಾಮಿ ಕಟುವಾಗಿ ವಿರೋಧಿಸಿದ್ದರು.

ಮೇಕೆದಾಟು ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮೀತಿ ರಚನೆ ಮಾಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು  ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ  ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಗುರುವಾರ ಬೆಂಗಳೂರಿನಲ್ಲಿ ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರ ಸಭೆ ನಡೆಯಿತು.  ಆ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್,  ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ,  ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ದರು.

 ಮೇಕೆದಾಟು ಯೋಜನೆ ಪ್ರದೇಶ ವ್ಯಾಪ್ತಿಯ ಕಚ್ಚಾ ರಸ್ತೆಯ ಕುರಿತಂತೆ ತಮಿಳುನಾಡಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.  ಅದನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಹಸಿರು ಪೀಠ ಸಮಿತಿಯೊಂದನ್ನು ರಚನೆ ಮಾಡಿದೆ. ಅದು ಸಮಂಜಸವಾದ ಕ್ರಮ ಅಲ್ಲ. ಹೀಗಾಗಿ ಈ ಆದೇಶವನ್ನು ಹಸಿರು ಪೀಠದ ಮುಂದೆಯೇ ಪ್ರಶ್ನಿಸಲು ನಾವು ನಿರ್ಧರಿಸಿದ್ದೇವೆ. ರಾಷ್ಟ್ರೀಯ ಹಸಿರು ಪೀಠ ತನ್ನ ಈ ಆದೇಶವನ್ನು ಮರು ಪರಿಶೀಲಿಸಬೇಕೆಂದು ಮನವಿ ಮಾಡಿಕೊಳ್ಳಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.



Join Whatsapp