ಯುದ್ಧ ವಿರಾಮ ಪರಿಶ್ರಮದ ಗೆಲುವು – ಫೆಲೆಸ್ತೀನ್ ಅಳಿಸಲಾಗದ ಪ್ರತಿರೋಧ

Prasthutha|

-ಅನೀಸ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಪಿಎಫ್ ಐ

- Advertisement -

ಹನ್ನೊಂದು ದಿನಗಳ ಮಾರಣಹೋಮದ ಕದನ, ಸಣ್ಣ ಗಾಜಾಪಟ್ಟಿಯಲ್ಲಿ ಹಿಂದೆ ನಡೆದುದಕ್ಕಿಂತ ದೊಡ್ಡ ಜೀವ ಹಾಗೂ ಸೊತ್ತು ಹಾನಿಯನ್ನು ಈ ಹನ್ನೊಂದು ದಿನಗಳ ಕದನ ಮಾಡಿದೆ. ಇಸ್ರೇಲ್ ತನ್ನ ವಿಮಾನ ಪಡೆಯನ್ನು ಗಗನಗಾಮಿ ಉಗ್ರಗಾಮಿಗಳಾಗಿ ಬಳಸಿಕೊಂಡು ಆಕ್ರಮಿತ ಗಾಜಾಪಟ್ಟಿಯಲ್ಲಿನ ಸಂರಚನೆಗಳನ್ನು ನಾಶ ಮಾಡಿದೆ.

ಇಪ್ಪತ್ತು ಲಕ್ಷ ಫೆಲೆಸ್ತೀನ್ ಜನರ ವಸತಿ ನೆಲೆಯಾದ 41 ಕಿ.ಮೀ.ಗಳ ಗಾಜಾ ಪಟ್ಟಿಯ 52,000 ಜನರು ವಸತಿ ಹೀನರಾದರು. ತಾತ್ಕಾಲಿಕವಾಗಿ ಇಸ್ರೇಲ್ ದಾಳಿ ನಿಂತಿದೆ, ಆದರೆ ಫೆಲೆಸ್ತೀನ್ ಜನರು ಅನುಭವಿಸಿದ ನೋವು ಕಾರಣದ ವಿರೋಧ ನಿಲ್ಲುವುದಿಲ್ಲ. ಶೀಘ್ರದಲ್ಲೇ ಇಸ್ರೇಲ್ ಮತ್ತೆ ಫೆಲೆಸ್ತೀನ್ ಜನರ ಮೇಲೆ ತನ್ನ ದೌರ್ಜನ್ಯದ ದಾಳಿ ಮುಂದುವರಿಸುತ್ತದೆ.

- Advertisement -

ಹಿಂದಿನ ಯುದ್ಧಗಳಿಗಿಂತ ವಿಭಿನ್ನವಾದ ಕಣ್ಣೋಟಗಳು, ಒಳನೋಟಗಳು ಈಗ ನಡೆದ ಕದನದಲ್ಲಿ ಇದೆ. ಕದನ ವಿರಾಮ ಘೋಷಿಸಿ ಇಸ್ರೇಲ್ ಮತ್ತು ಹಮಾಸ್ ಇಬ್ಬರೂ ಇದು ತಮ್ಮ ಜಯ ಎಂದಿದ್ದಾರೆ. ವ್ಯತ್ಯಾಸವೆಂದರೆ ಫೆಲೆಸ್ತೀನ್ ಕಡೆ ವಿಜಯೋತ್ಸವ ಕಾಣಿಸಿದರೆ, ಇಸ್ರೇಲ್ ಕಡೆ ರಾಜಕಾರಣಿಗಳಷ್ಟೆ ಗೆಲುವು ಎಂದರು. ಆದರೆ ಯಥಾಸ್ಥಿತಿ ಮುಂದುವರಿದು ಇಸ್ರೇಲ್ ವಶಪಡಿಸಿಕೊಂಡಿದ್ದ ಫೆಲೆಸ್ತೀನ್ ನೆಲ ಅವರ ವಶವೇ ಇದೆ ಎಂದರೆ ಯುದ್ಧದ ಫಲ ದೊಡ್ಡ ಸೊನ್ನೆ. ಆದರೂ ಇದು ಹಮಾಸ್ ಹಾಗೂ ಫೆಲೆಸ್ತೀನ್ ನಾಯಕರು ಕಂಡ ಜಯವೇ ಆಗಿದೆ. ಇದನ್ನು ಅರಿಯಬೇಕೆಂದರೆ ಫೆಲೆಸ್ತೀನ್‌ ರ ಭವಿಷ್ಯಕ್ಕೆ ಸಂಬಂಧಿಸಿದಂತೆ ಆಗಿರುವ ಕೆಲವು ನೈಜತೆ ಹಾಗೂ ಬೆಳವಣಿಗೆಗಳು ಗಮನಾರ್ಹ.

ಯುದ್ಧವೆಂದ ಮೇಲೆ ಅಲ್ಲಿ ಹೋಲಿಸುವುದು ಇದ್ದೇ ಇರುತ್ತದೆ. ಸೇನೆ, ರಾಜತಾಂತ್ರಿಕತೆ, ಪ್ರಚಾರ ಮತ್ತು ಧನಬಲ ಇವು ಯುದ್ಧ ಫಲಿತಾಂಶದ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ. ಇಸ್ರೇಲ್ ಮತ್ತು ಹಮಾಸ್ ಹೋಲಿಸಿ ನೋಡಿದರೆ ಕಣ್ಣಿಗೆ ರಾಚುವ ವ್ಯತ್ಯಾಸ ಕಾಣಿಸುತ್ತದೆ. ಇಸ್ರೇಲ್ ಅತ್ಯಾಧುನಿಕ ವಾಯು ಸೇನೆ, ನೌಕಾಪಡೆ ಹಾಗೂ ಭೂದಂಡು ಹೊಂದಿದೆ. 875 ಯುದ್ಧ ವಿಮಾನಗಳು, 286 ಹೆಲಿಕಾಪ್ಟರ್‌ ಗಳು, ಮೂರು ಅಣುಚಾಲಿತ ಜಲಾಂತರ್ಗಾಮಿಗಳು, 3,800 ಟ್ಯಾಂಕ್‌ ಗಳು, 6,390 ಶಸ್ತ್ರ ಸಜ್ಜಿತ ವಾಹನಗಳು. ಇದಕ್ಕೆ ಪ್ರತಿಯಾಗಿ ಹಮಾಸ್ ಯಾವ ವಾಯುಪಡೆಯನ್ನೂ ಹೊಂದಿಲ್ಲ. ಅವರ ಯುದ್ಧಾಸ್ತ್ರಗಳು ನಾಡ ರಾಕೆಟ್ ಮಾತ್ರ.

ಇಸ್ರೇಲ್ ಸೇನೆಯಲ್ಲಿ 1,33,000 ಜನ ಸೈನಿಕರು ಹಾಗೂ 3,80,000 ಜನ ಮೀಸಲು ಸೈನಿಕರಿದ್ದಾರೆ. ಹಮಾಸ್ ಹೋರಾಟಗಾರರ ಸಂಖ್ಯೆ 30,000. ಈ ಅಂಕೆಗಳು ಅಸಮ ಬಲ ಪ್ರತೀಕ ಹಾಗೂ ಡೇವಿಡ್ ಮತ್ತು ಗೋಲಿಯತ್ ರಿಗೆ ಹೋಲಿಸಬಹುದು. ಅಂದರೆ ಹಮಾಸ್ ಒಂದು ದಿನ ಕೂಡ ಯುದ್ಧದಲ್ಲಿ ಇಸ್ರೇಲ್‌ ನೆದುರು ನಿಲ್ಲುವುದು ಸಾಧ್ಯವಿಲ್ಲ. ಆದರೆ ಆ ಬ್ರಹ್ಮಾಂಡ ಬಲದ ಇಸ್ರೇಲ್ ಎದುರು ನಡೆದುದೇ ಬೇರೆ. ಹಮಾಸ್ ನೆಲೆಗಳನ್ನೆಲ್ಲ ವಿಮಾನ ದಾಳಿಯಿಂದ ನುಚ್ಚುನೂರು ಮಾಡಿರುವುದಾಗಿ ಹೇಳಿದ ಬಳಿಕವೂ ಹಮಾಸ್ ರಾಕೆಟ್ ದಾಳಿ ನಡೆದೇ ಇತ್ತು. ಹಮಾಸ್ ರಾಕೆಟ್ ಕೈಯಿಂದ ನಿರ್ಮಿಸುವ ಜಾಗ ಆ 41 ಕಿ.ಮೀ ಪಟ್ಟಿ ಒಳಗಡೆಯೇ ಇತ್ತು. ಯುದ್ಧದ ನಡುವೆ ಹಮಾಸ್ ರಾಕೆಟ್‌ ಗಳು ಹೆಚ್ಚು ಬಲಯುತ ಮತ್ತು ಹೆಚ್ಚು ದೂರಗಾಮಿ ಆದುದು ಇಸ್ರೇಲಿಗರ ಮತಿ ಕೆಡಿಸಿತ್ತು; ಜಾಗತಿಕ ರಕ್ಷಣಾ ತಜ್ಞರನ್ನು ಸಹ.

ಇನ್ನೊಂದು ಮುಖ್ಯ ಅಂಶವೆಂದರೆ ಇಸ್ರೇಲಿ ಕಮಾಂಡೋ ಬಲವನ್ನು ಹಮಾಸ್ ನೆಲಪಡೆ ತಡೆದು ನಿಲ್ಲಿಸಿದ್ದು. ಹಮಾಸ್ ಟ್ಯಾಂಕ್ ನಿರೋಧಕ ಕ್ಷಿಪಣಿ ಕಾರಣ ಸಾವು ಭಯದಿಂದ ಇಸ್ರೇಲ್ ಭೂಪಡೆ ಮತ್ತು ಟ್ಯಾಂಕ್‌ ಗಳನ್ನು ಬಳಸಲಿಲ್ಲ. ತಮ್ಮ ಮಟ್ಟದಲ್ಲಿ ಹಮಾಸ್ ತಮ್ಮ ನೆಲೆ ಕಾಯ್ದುಕೊಂಡುದು ಅವರ ಗೆಲುವಾಗಿದೆ.

ಇಸ್ರೇಲ್ ಕದನ ವಿರಾಮ ಒಪ್ಪಲು ಬಹಿರಂಗ ಕಾರಣಗಳು ಹಲವು. ಮುಖ್ಯವಾಗಿ ಫೆಲೆಸ್ತೀನ್ ಪರ ಜಾಗತಿಕ ಒಲವು ಕಾಣುತ್ತಿತ್ತು. ಪರಂಪರೆಯಂತೆ ಪಾಶ್ಚಾತ್ಯರು ಇಸ್ರೇಲ್ ಪರ, ಕಾರಣ, ಹಾಲಿವುಡ್ ಸಹಿತ ಮಾಧ್ಯಮಗಳ ಮೇಲೆ ಇರುವ ಜಿಯೋನಿಸ್ಟರ ಹಿಡಿತ. ಪಾಶ್ಚಾತ್ಯರು ಫೆಲೆಸ್ತೀನ್ ಹೋರಾಟವನ್ನು ಉಗ್ರರ ಕದನ ಎಂದರೂ ಅಮೆರಿಕ, ಯೂರೋಪಿನ ಜನರಲ್ಲಿ ಅದಕ್ಕೆ ಸಹಮತವಿಲ್ಲ. ಜಾಗತಿಕವಾಗಿ ಜನರು ಫೆಲೆಸ್ತೀನರಿಗೆ ಅವರ ನೆಲದ ಹಕ್ಕು ಇದೆ ಎಂದೇ ಭಾವಿಸಿದರು. ಇತ್ತೀಚೆಗೆ ಟೈಮ್ಸ್ ಪತ್ರಿಕೆಯು ಹೇಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಂತರ್ಜಾಲ ಚಟುವಟಿಕೆಯು ಜನಾಂಗೀಯತೆ ಬೆಳೆಸಿದೆ ಎಂದು ಲೇಖನ ಪ್ರಕಟಿಸಿತ್ತು. ಇದರ ಎದುರು ಬಲವು ಫೆಲೆಸ್ತೀನ್ ಪರ ಎದ್ದಿದೆ. ಅದೇ ಸಮಯದಲ್ಲಿ ಅಂತರ್ಜಾಲದಲ್ಲಿ ಫೆಲೆಸ್ತೀನ್ ಪರ ಪ್ರಚಾರ ಯುದ್ಧ ಜೋರಾಯಿತು. ಅಲ್ಲದೆ ಮಾರ್ಕ್ ರಫೆಲೊ, ಸೂಸನ್ ಸಾರಂಡನ್, ಬೆಲ್ಲಾ ಹ್ಯಾಡಿದ್ ಮೊದಲಾದ ಸೆಲೆಬ್ರಿಟಿಗಳು ಮುಕ್ತವಾಗಿ ಇಸ್ರೇಲ್ ಟೀಕಿಸಿ, ಫೆಲೆಸ್ತೀನ್ ಬೆಂಬಲಿಸಿದರು.

ಗೂಗಲ್, ಆಪಲ್‌ ನಂಥ ಟೆಕ್ ದೈತ್ಯ ಗುಂಪುಗಳು ಇಸ್ರೇಲ್ ಆಕ್ರಮಣವು ಫೆಲೆಸ್ತೀನ್‌ ಗೆ ಮಾಡಿದ್ದ ಹಾನಿಯನ್ನು ಗುರುತಿಸಿದವು. ನಿಧಾನವಾಗಿ ಇವೆಲ್ಲ ಫೆಲೆಸ್ತೀನ್‌ ಗೆ ಪೂರಕವಾದವು ಮತ್ತು ಭವಿಷ್ಯದ ಬೆಂಬಲವಾದವು.

ಅಮೆರಿಕದ ರಾಜಕಾರಣಿಗಳು ಸಹ ಈ ಬಾರಿ ಫೆಲೆಸ್ತೀನ್ ಬೆಂಬಲಿಸಿದರು. ಇಸ್ರೇಲ್‌ ಗೆ ವಾರ್ಷಿಕ 40 ಲಕ್ಷ ಡಾಲರ್ ನೆರವೀಯುವ ಯುಎಸ್ ಸದಾ ಇಸ್ರೇಲ್ ಪರ ಇತ್ತು. ಅಮೆರಿಕದ ಇಸ್ರೇಲಿ ಲಾಬಿ ಬೆಂಬಲ ಡೆಮಾಕ್ರಟಿಕ್ ಪಕ್ಷಕ್ಕೆ ಸದಾ ಇತ್ತು. ಅಧ್ಯಕ್ಷ ಬೈಡನ್ ಇಸ್ರೇಲ್‌ ನ ಪ್ರಬಲ ಪ್ರತಿಪಾದಕರು. ಇಸ್ರೇಲಿಗೆ ಕೊಡುವ 30 ಲಕ್ಷ ಡಾಲರ್ ನೆರವು ಅತ್ಯುತ್ತಮ ಬಂಡವಾಳ ಹೂಡಿಕೆ ಎಂದು ಬೈಡನ್ ಯುವಕನಿದ್ದಾಗ ಹೇಳಿದ್ದರು. ಆದರೆ ಈ ಬಾರಿ ಪಕ್ಷದೊಳಗೇ ಇಸ್ರೇಲ್ ದಾಳಿ ಖಂಡಿಸುವಂತೆ ಒತ್ತಡ ಬಂದುದರಿಂದ ಬೈಡನ್ ನಿರುತ್ತರರಾದರು. ಅಲೆಕ್ಸಾಂಡ್ರಾ ಒಕಾಸಿಯೋ ಕಾರ್ಟೆಜ್, ರಶೀದಾ ತಲೈಬ್, ಅಯಾನ್ನಾ ಎಂಬ ಸ್ಕ್ವಾಡ್ ಬೈಡನ್‌ ರು ಇಸ್ರೇಲ್ ಬೆಂಬಲಿಸುವುದನ್ನು ತೀವ್ರವಾಗಿ ಖಂಡಿಸಿತು.

ಖ್ಯಾತ ರಾಜಕಾರಣಿ ಬೆರ್ನಿ ಸ್ಯಾಂಡರ್ಸ್ ಇಸ್ರೇಲಿಗೆ 40 ಲಕ್ಷ ಡಾಲರ್ ನೆರವು ಅನ್ಯಾಯ, ಅದು ಅಮಾನವೀಯ ಎಂದಿದ್ದಾರೆ. ಬೈಡನ್ ಒತ್ತಡ ತಾಳಲಾರದೆ ನೆತನ್ಯಾಹುರಿಗೆ ಕದನ ವಿರಾಮಕ್ಕೆ ಸೂಚಿಸಿದರು.

ಯುದ್ಧ ತುಂಬ ಉದ್ದ ಎಳೆದರೆ ಅದು ಇಸ್ರೇಲ್‌ ನ ತಂತ್ರಜ್ಞಾನ, ಕೈಗಾರಿಕಾ ಉತ್ಪನ್ನ, ಪ್ರವಾಸೋದ್ಯಮ ಆರ್ಥಿಕತೆಗೂ ಹೊಡೆತ. ಅದಾಗಲೇ ಯುದ್ಧವು ಇಸ್ರೇಲ್‌ ಗೆ 25 ಕೋಟಿ ಡಾಲರ್ ವೆಚ್ಚ ತಂದಿತ್ತು. 11 ದಿನಕ್ಕೆ ನಿತ್ಯ 5 ಕೋಟಿ ಡಾಲರ್ ವೆಚ್ಚ. ಟೆಲ್‌ ಅವೀವ್ ಸ್ಟಾಕ್ ಮಾರ್ಕೆಟ್ ಶೇಕಡಾ 26ರಷ್ಟು ಕುಸಿದಾಗಿತ್ತು. ಗಾಝಾ ಗಡಿಯ ಕೈಗಾರಿಕೆಗಳೆಲ್ಲ ಬಂದ್, ಇತರೆಡೆ ರಕ್ಷಣಾ ಕಾರಣಕ್ಕೆ ಶೇಕಡಾ 17ರಷ್ಟು ಬಂದ್. ಇಸ್ರೇಲ್ ಉತ್ಪಾದಕರ ಲೆಕ್ಕದಲ್ಲಿ ಮೇ 11-13ರ ನಡುವೆ 16.6 ಕೋಟಿ ಡಾಲರ್ ನಷ್ಟ. ಜಿಡಿಪಿ ಮೇಲೆ ಶೇಕಡಾ 0.5ರಷ್ಟು ನಷ್ಟದ ಹೊರೆ.

ರಾಕೆಟ್ ದಾಳಿ ಕಾರಣ ಬೆನ್ ಗುರಿಯನ್, ರೆಮೋನ್ ಪ್ರಮುಖ ವಿಮಾನ ನಿಲ್ದಾಣಗಳು ಮುಚ್ಚಿದವು. ಇಸ್ರೇಲ್‌ ಗೆ ಕ್ರಿಶ್ಚಿಯನ್, ಜ್ಯೂ ಪ್ರವಾಸಿಗರು ಬರುತ್ತಲೇ ಇರುತ್ತಾರೆ. 2019ರಲ್ಲಿ ಪ್ರವಾಸೋದ್ಯಮವು 45 ಲಕ್ಷ ಪ್ರವಾಸಿಗರನ್ನು ಕಂಡಿದೆ. ಯುದ್ಧ ಮುಂದುವರಿದರೆ ಸಾಂಕ್ರಾಮಿಕದಿಂದ ಈಗಷ್ಟೇ ಚೇತರಿಕೆ ಕಾಣುತ್ತಿದ್ದ ಇಸ್ರೇಲ್ ಆರ್ಥಿಕತೆಯು ಮಗದೊಮ್ಮೆ ಕುಸಿಯಲಿದೆ ಎಂದು ಹಲವು ವರದಿಗಳು ಭವಿಷ್ಯ ನುಡಿದಿದ್ದವು. ಆದ್ದರಿಂದ ಇಸ್ರೇಲಿಗೆ ಕದನ ವಿರಾಮ ಅನಿವಾರ್ಯ ಆಯಿತು. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಹಮಾಸ್‌ ನ ಕಾರ್ಯತಂತ್ರವು ಇಸ್ರೇಲಿನ ಆರ್ಥಿಕತೆಗೆ ಅಡ್ಡಿ ಉಂಟುಮಾಡುವುದೇ ಆಗಿತ್ತು. ಈ ಕಾರ್ಯತಂತ್ರವು ಫಲಪ್ರದವಾಯಿತು.

ನೆತನ್ಯಾಹು ಈ ಯುದ್ಧವು ಮತ್ತೆ ನಾನು ಚುನಾವಣೆ ಗೆಲ್ಲಲು ಸಹಕಾರಿ ಎಂದು ತಿಳಿದುದು ತಪ್ಪಾಯಿತು. ಇಸ್ರೇಲ್ ಪಡೆ ಹಮಾಸ್ ಪುಡಿ ಮಾಡುತ್ತದೆ ಎಂದುಕೊಂಡರು. ಆದರೆ ಹಮಾಸ್ ಬಲಗುಂದಲಿಲ್ಲ. ಅಧಿಕೃತವಾಗಿ ಲೋಕದಲ್ಲಿ ಫೆಲೆಸ್ತೀನ್‌ಗೆ ಬೆಂಬಲ ಹೆಚ್ಚಿದರೆ, ಇಸ್ರೇಲ್‌ ಗೆ ವಿರೋಧ ತೀವ್ರಗೊಂಡಿತು. ಇಸ್ರೇಲ್ ಆಳುವವರು ಇನ್ನೇನು ಮಾಡುತ್ತಾರೆ, ಯುದ್ಧ ವಿರಾಮದ ಮೂಲಕ ಮುಖ ಉಳಿಸಿಕೊಂಡರು.

11 ದಿನಗಳ ಯುದ್ಧ ಮತ್ತು ಶೇಖ್ ಜರ್ರಾಹದಲ್ಲಿನ ಹೋರಾಟದ ಪ್ರಮುಖ ವೈಶಿಷ್ಟ್ಯತೆಯೆಂದರೆ, ಫೆಲೆಸ್ತೀನ್ ಜನರ ದೃಢನಿಶ್ಚಯ ಮತ್ತು ಸಹಿಷ್ಣುತೆ. ಫೆಲೆಸ್ತೀನಿಯನ್ನರು ಭೂಮಿರಹಿತ ಜನರಾಗಿದ್ದರೂ ಅವರು ಭರವಸೆ, ದೂರದೃಷ್ಟಿ ಮತ್ತು ಧೈರ್ಯಸ್ಥೆೃರ್ಯ ಹೊಂದಿರುವ ಜನರಾಗಿದ್ದಾರೆ.

ಯಾವುದೇ ಉದಾತ್ತ ಧ್ಯೇಯ ಸಾಧಿಸಬೇಕಾದರೆ, ದಬ್ಬಾಳಿಕೆ ಮತ್ತು ದೌರ್ಜನ್ಯದ ಸಂದರ್ಭದಲ್ಲಿಯೂ ಅಚಲತೆ ಇರಬೇಕು. ದಬ್ಬಾಳಿಕೆಗಾರರ ಪರವಾಗಿ ಯಾವುದೇ ರೀತಿಯ ಮೃದು ಧೋರಣೆಯನ್ನು ನಿರೀಕ್ಷಿಸುವುದು ನಿಷ್ಕಪಟವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧದ ಹೋರಾಟಕ್ಕೆ ನಮ್ಮನ್ನು ತಯಾರುಗೊಳಿಸುವುದು ಜನ ಚಳವಳಿಗೆ ಇರುವ ಏಕೈಕ ಆಯ್ಕೆಯಾಗಿದೆ.

ಗಾಜಾದಲ್ಲಿ ನಡೆದ ಯುದ್ಧವನ್ನು ಒಂದು ಪ್ರತ್ಯೇಕ ಘಟನೆಯಾಗಿ ನೋಡಬಾರದು, ಅದು ಫೆಲೆಸ್ತೀನಿಯನ್ನರ ಧೈರ್ಯಶಾಲಿ ಹೋರಾಟದ ಅಧ್ಯಾಯ ವಾಗಿ ನೋಡಬೇಕು. ಫೆಲೆಸ್ತೀನ್ ಹೋರಾಟದಿಂದ ಗೋಚರಿಸುವ ಅತ್ಯಂತ ಸ್ಫೂರ್ತಿದಾಯಕ ಸಂಗತಿಗಳೆಂದರೆ, ಅಲ್ಲಿನ ಯಾವುದೇ ವಯಸ್ಸಿನ ಪುರುಷರು, ಮಹಿಳೆಯರು ಅಥವಾ ಯಾವುದೇ ವಯಸ್ಸಿನ ಮಕ್ಕಳಲ್ಲಿ ದೂರದೃಷ್ಟಿಯ ಬಗ್ಗೆ ಸ್ಪಷ್ಟತೆಯಾಗಿದೆ. ಧ್ಯೇಯ ಅಥವಾ ಗುರಿಯ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವುದು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಪಾಠವಾಗಿದೆ. ದಶಕಗಳ ಕಾಲದಿಂದ ನಡೆಯುತ್ತಿರುವ ಫೆಲೆಸ್ತೀನ್ ಚಳವಳಿಯಿಂದ ಪ್ರಪಂಚದಾದ್ಯಂತದ ಜನರ ಚಳುವಳಿಗಳು ಕಲಿಯಲು ಸಾಕಷ್ಟು ಅಂಶಗಳಿವೆ ಮತ್ತು ಈಗ ಅವರ ಸ್ಥಿರ ಹೋರಾಟದಿಂದ ಅವರು ಯುದ್ಧಭೂಮಿಯಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರ ಹೃದಯವನ್ನೂ ಗೆದ್ದಿದ್ದಾರೆ.

ಫೆಲೆಸ್ತೀನ್ ಹೋರಾಟವು ಈ ಹಿಂದೆ ನಡೆದ ಎಲ್ಲಾ ಇತರ ಚಳುವಳಿಗಳಂತೆ ಪ್ರತಿಯೊಬ್ಬರ ಹೋರಾಟವಾಗಿದೆ. ನಿಜ ಫೆಲೆಸ್ತೀನ್ ಉದಯಿಸುತ್ತದೆ ಮತ್ತು ಇಸ್ರೇಲ್ ಮುದುರುತ್ತದೆ.

Join Whatsapp