1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್​ ಭಾರ ತಗ್ಗಿಸುವಂತೆ ಆದೇಶ: ಬ್ಯಾಗ್ ತೂಕ ಎಷ್ಟಿರಬೇಕು? ಇಲ್ಲಿದೆ ವಿವರ

Prasthutha|

ಬೆಂಗಳೂರು: 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ಹೊರೆ ತಗ್ಗಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

- Advertisement -

ಸರ್ಕಾರವು 2019ರಲ್ಲಿಯೇ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿತ್ತು. ಆದರೂ ಬಹುತೇಕ ಶಾಲೆಗಳು ವೇಳಾಪಟ್ಟಿಯನ್ನು ನಿಗದಿ ಮಾಡದ ಪರಿಣಾಮ ಮಕ್ಕಳು ಬೆನ್ನುಮೂಳೆ ಮುರಿಯುವಂತೆ ಪುಸ್ತಕಗಳನ್ನು ಹೊರುವಂತಾಗಿತ್ತು. ಇದೀಗ ಶೈಕ್ಷಣಿಕ ವರ್ಷಾರಂಭ ಹಿನ್ನೆಲೆ ಕಡ್ಡಾಯವಾಗಿ ‘ಶಾಲಾ ಬ್ಯಾಗ್ ಹೊರೆ ತಗ್ಗಿಸುವಂತೆ’ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಅಧ್ಯಯನ ನಡೆಸಿ 1-10ನೇ ಕ್ಲಾಸ್ ಮಕ್ಕಳ ಬ್ಯಾಗ್ ತೂಕ ಎಷ್ಟು ಇರಬೇಕು ಎಂಬುದನ್ನು ಸೂಚಿಸಿದೆ. ವಿದ್ಯಾರ್ಥಿಗಳ ದೇಹದ ತೂಕದ ಶೇ.10ರಿಂದ 15 ರಷ್ಟು ಮಾತ್ರ ಶಾಲಾ ಬ್ಯಾಗ್ ತೂಕವಿರಬೇಕು ಎಂದು ಶಿಫಾರಸು ಮಾಡಿದೆ. ಇದನ್ನು ಮೂಳೆತಜ್ಞರು ಕೂಡ ಅಂಗೀಕರಿಸಿದ್ದಾರೆ. ವರದಿಯಲ್ಲಿ ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇಕಡ 10 ರಿಂದ 15 ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದಾಗಿ ಮೂಳೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ಕುರಿತು ಸರ್ಕಾರಿ ಆದೇಶದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ.

- Advertisement -

ವಿದ್ಯಾರ್ಥಿಯ ಶಾಲಾ ಬ್ಯಾಗ್‌ ತೂಕ ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

1-2 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 1.5 ರಿಂದ 2 ಕೆಜಿ

3 -5 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 2 ರಿಂದ 3 ಕೆಜಿ

6 -8 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 3 ರಿಂದ 5 ಕೆಜಿ

9 -10 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 4 ರಿಂದ 5 ಕೆಜಿ

ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

ಶಾಲಾ ಎಸ್.ಎಂ.ಸಿ./ ಎಸ್.ಡಿ.ಎಂ.ಸಿ ಹಾಗೂ ಶಾಲಾ ಮುಖ್ಯಸ್ಥರು ಮೇಲ್ಕಂಡ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. ಹಾಗೂ 1 ರಿಂದ 5ನೇ ತರಗತಿವರೆಗೆ ಎನ್.ಸಿ.ಇ.ಆರ್.ಟಿ ನಿಗದಿಪಡಿಸಿರುವ ಪಠ್ಯಕ್ರಮವನ್ನು ಹೊರತುಪಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಿ ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸತಕ್ಕದ್ದು ಮತ್ತು ಈ ಬಗ್ಗೆ ನಿಗಾವಹಿಸಲು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ವಿಶೇಷ ತಂಡವನ್ನು ರಚಿಸತಕ್ಕದ್ದು ಎಂದು ತಿಳಿಸಿದೆ.

ಇನ್ನು ಅತಿಯಾದ ಹೊರೆ ಇರುವ ಶಾಲಾ ಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದೆ.

Join Whatsapp