ಭೇಟಿಗೆ ಅವಕಾಶ ನೀಡುತ್ತಿಲ್ಲ; ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಮುನಿಯಪ್ಪ ಆರೋಪ

Prasthutha|

ಹೊಸದಿಲ್ಲಿ: ಕೇಂದ್ರ ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಅವರು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಆಹಾರ ಇಲಾಖೆ ಸಚಿವ ಕೆಹೆಚ್ ಮುನಿಯಪ್ಪ ಆರೋಪಿಸಿದ್ದಾರೆ.

- Advertisement -

ದೆಹಲಿಗೆ ತೆರಳಿರುವ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕಳೆದ 3 ದಿನಗಳಿಂದ ಗೋಯಲ್ ಅವರು ಭೇಟಿಗೆ ಕಾಲಾವಕಾಶ‌ ನೀಡುತ್ತಿಲ್ಲ. ಕೇಂದ್ರ ಆಹಾರ ಇಲಾಖೆಯು ಭೇಟಿಗೆ ಸಮಯ ನೀಡಿತ್ತು. ಹೀಗಾಗಿ ದೆಹಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆಗೆ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ಆ ಅವಕಾಶ‌ವನ್ನೂ ನಿರಾಕರಿಸಿದ್ದಾರೆ. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಜನರಿಗೆ ನೀಡಿರುವ ಭರವಸೆಯಂತೆ ಅಕ್ಕಿ ನೀಡುತ್ತೇವೆ. ರಾಜ್ಯದ ಜನರಿಗೆ ಅಕ್ಕಿ ನೀಡಲು ಪರ್ಯಾಯ ವ್ಯವಸ್ಥೆ ಮಾಡ್ತಿದ್ದೇವೆ. ಛತ್ತೀಸ್​ಗಢ, ಪಂಜಾಬ್ ಸರ್ಕಾರ ಅಕ್ಕಿ ನೀಡಲು ಮುಂದೆ ಬಂದಿವೆ. ಅಕ್ಕಿ ದರ ಹೆಚ್ಚಳವಾಗುತ್ತಿದೆ, ಅದಕ್ಕೆ ಹಣದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಮುನಿಯಪ್ಪ ಹೇಳಿದ್ದಾರೆ.

- Advertisement -

ಜನರ ಬೇಡಿಕೆಯಂತೆ 8 ಕೆಜಿ ಅಕ್ಕಿ, 2 ಕೆಜಿ ರಾಗಿ ಅಥವಾ ಜೋಳ ನೀಡಲಿದ್ದೇವೆ. ಜುಲೈ 1ರಿಂದ ಆರಂಭವಾಗಬೇಕಿದ್ದ ಅಕ್ಕಿ ವಿತರಣೆಯಲ್ಲಿ ವಿಳಂಬವಾಗಲಿದೆ. ಆಗಸ್ಟ್ ಒಳಗಾಗಿ ಜನರಿಗೆ 10 ಕೆಜಿ ಆಹಾರ ಧಾನ್ಯ ನೀಡುತ್ತೇವೆ ಎಂದು ಮುನಿಯಪ್ಪ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಖರೀದಿ ವಿಚಾರವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ನಡೆಯುತ್ತಿದೆ. ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮ (ಎಫ್​ಸಿಐ) ನಿರಾಕರಿಸಿದೆ. ಕೇಂದ್ರದ ಬಿಜೆಪಿ ಸರ್ಕಾರದ ಸೂಚನೆ ಮೇರೆಗೆ ಎಫ್​ಸಿಐ ಈ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.