ಗೃಹ ಜ್ಯೋತಿ ಯೊಜನೆಯಡಿ ವಿದ್ಯುತ್​ ನಿಗಮಗಳಿಗೆ ಹಣ ಬಿಡುಗಡೆ ಮಾಡಿದ ಸರ್ಕಾರ; ಯಾವ ನಿಗಮಕ್ಕೆ ಎಷ್ಟು ಸಿಕ್ಕಿದೆ? ಇಲ್ಲಿದೆ ವಿವರ

Prasthutha|

ಬೆಂಗಳೂರು: ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್​​ಗಳಲ್ಲಿ ವಿತರಿಸಲಾಗಿರುವ ಟಿಕೆಟ್​​ನ ಒಟ್ಟು ಮೊತ್ತದ ಮೊದಲ ಕಂತನ್ನು ಈಗಾಗಲೇ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಸಾರಿಗೆ ನಿಗಮಗಳಿಗೆ ನಿಗಮಗಳಿಗೆ ಮೊದಲ ಕಂತಿನ ಹಣವಾಗಿ 125.48 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರ ಬೆನ್ನೆಲ್ಲೇ ಇದೀಗ ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ಯೋಜನೆಯಾದ 200 ಯುನಿಟ್​ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ.

- Advertisement -

2023-24ನೇ ಸಾಲಿನ ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಎಲ್ಲಾ ವಿದ್ಯುತ್ ಪೂರೈಕೆ ಸಂಸ್ಥೆ (ಎಸ್ಕಾಂ)ಗಳಿಗೆ ಮುಂಗಡ ಸಹಾಯಧನ ಬಿಡುಗಡೆ ಮಾಡಲಾಗಿದೆ. ಜುಲೈ-2023ರ ಮಾಹೆಗೆ ಒಟ್ಟು 476 ಕೋಟಿ ರೂಪಾಯಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಈ ಮುಂಗಡ ಸಹಾಯಧನದಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)ಗೆ ಸಿಂಹಪಾಲು ಸಿಕ್ಕಿದೆ.

- Advertisement -

ಆದೇಶದ ಪ್ರಕಾರ ಹಣ ಸ್ವೀಕೃತಿ ಮಾಡುವ ಸಂಸ್ಥೆಗಳು ಅನುಸರಣಾ ವರದಿ ಮತ್ತು ಬಳಕೆಯ ಪ್ರಮಾಣ ಪತ್ರವನ್ನು (Utilization Certificate), ಈ ಪ್ರವರ್ಗದ ಫಲಾನುಭವಿಗಳ ಮಾಹಿತಿಯೊಂದಿಗೆ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ. ಹಾಗಾದ್ರೆ, ಯಾವೆಲ್ಲ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ಎಷ್ಟು-ಎಷ್ಟು ಅನುದಾನ ಸಿಕ್ಕಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಸಹಾಯಧನ ಹಂಚಿಕೆಯ ವಿವರ

 ಬೆಸ್ಕಾಂ – 235.07 ಕೋಟಿ ರೂ.

ಮೆಸ್ಕಾಂ – 52.73 ಕೋಟಿ ರೂ.

 ಹೆಸ್ಕಾಂ – 83.48 ಕೋಟಿ ರೂ.

 ಗೆಸ್ಕಂ – 53.46 ಕೋಟಿ ರೂ.

 ಚೆಸ್ಕಾಂ – 51.26 ಕೋಟಿ ರೂ.

ಒಟ್ಟು – 476 ಕೋಟಿ ರೂಪಾಯಿ

Join Whatsapp