ಬೆಂಗಳೂರು: ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಕರ್ನಾಟಕ ಗಂಗಾಮತಸ್ಥರ ಸಂಘ ಕರ್ನಾಟಕ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಪಿ.ವಿ. ಸೀತಾರಾಂ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹುಸಿ ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿವೆ. ಎಲ್ಲಾ ರಂಗಗಳಲ್ಲೂ ನಮ್ಮ ಸಮುದಾಯ ಹಿಂದುಳಿದಿದೆ. ನಮ್ಮ ಸಮುದಾಯವನ್ನು ಎಸ್.ಟಿ. ಪಂಗಡಕ್ಕೆ ಸೇರಿಸುವಂತೆ ಐದು ಬಾರಿ ಕುಲ ಶಾಸ್ತ್ರೀಯ ಅಧ್ಯಯನ ಮಾಡಲಾಗಿದ್ದು, ಎಲ್ಲಾ ಅಧ್ಯಯನಗಳು ಸಮುದಾಯದ ಪರವಾಗಿ ವರದಿ ನೀಡಿವೆ. ಇಂದಲ್ಲಾ ನಾಳೆ ಒಳ್ಳೆಯ ಕಾಲ ಬರುತ್ತದೆ ಎಂದು ಕಾಯುತ್ತಾ ಕುಳಿತಿದ್ದೇವೆ. ಆದರೆ ನಮ್ಮ ಸಮುದಾಯಗಳನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಾ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ, ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಸಪ್ತ ಖಾತೆಗಳನ್ನು ಹೊಂದಿದ್ದ ಬಾಬು ರಾವ್ ಚಿಂಚಣಸೂರ್ ನಮ್ಮ ಸಮುದಾಯವನ್ನು ದಾರಿ ತಪ್ಪಿಸಿದ್ದಾರೆ. ಸಮುದಾಯದ ಪ್ರತಿನಿಧಿ ಎಂದು ಹೇಳಿಕೊಂಡು ಜನಾಂಗದ ಯಾವುದೇ ಬೆಳವಣಿಗೆಗೆ ಅವರ ಕೊಡುಗೆ ಶೂನ್ಯ. ಚಿಂಚನ ಸೂರ್ ನಮ್ಮ ಪ್ರತಿನಿಧಿಯಾಗಿ ಸುಳ್ಳು ಹೇಳಿದ್ದಾರೆ. ಸಮುದಾಯಕ್ಕೆ ತಮ್ಮ ತೊಡೆ ಚರ್ಮ ಸುಲಿದು ಚಪ್ಪಲಿ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ ಅವರು ಪರಮ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.
ದುರದೃಷ್ಟಕರವೆಂದರೆ ಈ ವರೆಗೆ ನಮ್ಮ ಸಮುದಾಯದಿಂದ ಯಾರೊಬ್ಬರೂ ಐಎಎಸ್ ಅಧಿಕಾರಿಯಾಗಿಲ್ಲ. ಸಂಸದರಾಗಿ ಆಯ್ಕೆಯಾಗುವ ಮುನ್ನ ಸಾಕಷ್ಟು ಭರವಸೆ ನೀಡಿದ್ದ ಎಂ.ಪಿ. ಜಾಧವ್ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕಲಬುರಗಿ ಸಂಸದರಾಗುವ ಮುನ್ನ ಉಮೇಶ್ ಜಾಧವ್ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂಬಿಗರ ಚೌಡಯ್ಯ ನಿಗಮ ರಚಿಸಿ ಒಂದು ಕೋಟಿ ರೂ ಬಿಡುಗಡೆ ಮಾಡಿದರು. ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ನಮ್ಮ ಸಮುದಾಯಕ್ಕೆ ಸಹಾಯ ಮಾಡಿಲ್ಲ. ಹೀಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ರಾಜಕಾರಣಿಗಳನ್ನು ಬಿಟ್ಟು ಸಮುದಾಯದಿಂದಲೇ ನಾವು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಗಂಗಾಮತಸ್ಥರು ಸುಮಾರು 40 ರಿಂದ 50 ಲಕ್ಷ ಜನಸಂಖ್ಯೆ ಇದ್ದು, ಹಿಂದುಳಿದ 39 ಪಂಗಡಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. 37 ವಿಧಾನಸಭೆ ಕ್ಷೇತ್ರದಲ್ಲಿ ನಾವು ನಿರ್ಣಾಯಕರಾಗಿದ್ದು, 17 ಕ್ಷೇತ್ರಗಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಕಾರವಾರದಿಂದ ಕೋಲಾರದವವರೆಗೂ ನಮ್ಮ ಜನಾಂಗ ಹಬ್ಬಿಕೊಂಡಿದೆ ಎಂದು ಪಿ.ವಿ. ಸೀತಾರಾಂ ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಕೆ.ಹೆಚ್. ಗೋಪಾಲ್, ಹೆಚ್.ಬಿ. ಗೋಪಾಲ್, ಸಂಘಟನಾ ಕಾರ್ಯದರ್ಶಿಗಳಾದ ಕುಮಾರ್.ಕೆ, ಮುನಿರಾಜ ಎನ್, ಪ್ರದೀಪ್ ಕುಮಾರ್ ಟಿ., ಚಿಕ್ಕ ತಿಮ್ಮಯ್ಯ ಟಿ.ಎ. ಗಂಗಾದರ್, ಮಂಜುನಾಥ್ ಸುಣಗಾರ್ ಭಾಗವಹಿಸಿದ್ದರು.