ಮಂಗಳೂರು | ಜಿಲ್ಲಾ ಕಚೇರಿಗೆ NIA ಅಕ್ರಮ ಪ್ರವೇಶ ವಿರೋಧಿಸಿ ಇಂದು ಸಂಜೆ SDPI ಪ್ರತಿಭಟನೆ

ಮಂಗಳೂರು: ತನಿಖೆಯ ನೆಪದಲ್ಲಿ SDPI ಪಕ್ಷದ ಜಿಲ್ಲಾ ಕಚೇರಿಗೆ ಬಾಗಿಲು ಮತ್ತು ಗಾಜನ್ನು ಮುರಿದು ಅಕ್ರಮ ಪ್ರವೇಶಿಸಿರುವ NIA ತಂಡದ ನಡೆಯನ್ನು ವಿರೋಧಿಸಿ ಪಕ್ಷದ ವತಿಯಿಂದ ಶನಿವಾರ ಸಂಜೆ 4.30ಕ್ಕೆ ಜಿಲ್ಲೆಯ 4 ಕಡೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರ್, ಸಾಮಾಜಿಕ ಸಂಘಟನೆಯಾದ PFI ವಿರುದ್ಧ ತನಿಖೆ ನಡೆಸುವ ನೆಪದಲ್ಲಿ NIA ತಂಡ, SDPI ಪಕ್ಷದ ಜಿಲ್ಲಾ ಕಚೇರಿಗೆ ತಡರಾತ್ರಿ ಸುಮಾರು 3.30ಕ್ಕೆ ದಾಳಿ ನಡೆಸಿ, ಕಚೇರಿಯ ಬಾಗಿಲು ಮತ್ತು ಗಾಜನ್ನು ಪುಡಿಗೈದು ಅಕ್ರಮ ಪ್ರವೇಶಗೈದಿದೆ. ಇದನ್ನು ವಿರೋಧಿಸಿ ಮತ್ತು ಬಂಧಿತ PFI ನಾಯಕರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಇಂದು ಸಂಜೆ 4.30ಕ್ಕೆ ಏಕಕಾಲದಲ್ಲಿ ಬಜಪೆ,ತೊಕ್ಕೊಟ್ಟು, ಪುತ್ತೂರು, ಬಿಸಿರೋಡಿನಲ್ಲಿ ಪ್ರತಿಭಟನೆಯನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ.

- Advertisement -