ಹೊಸದಿಲ್ಲಿ: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಪ್ರವೀಣ್ ಸೂದ್ ಅವರನ್ನು ಎರಡು ವರ್ಷಗಳ ಅವಧಿಗೆ ಕೇಂದ್ರೀಯ ತನಿಖಾ ದಳದ (CBI) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಸಿಬಿಐನ ಉನ್ನತ ಹುದ್ದೆಗೆ 3 ಅಧಿಕಾರಿಗಳನ್ನು ಆಯ್ಕೆ ಮಾಡಿತ್ತು.
ಶನಿವಾರ ಸಂಜೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಮೂರು ಅಧಿಕಾರಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು. ಪಟ್ಟಿಯಲ್ಲಿ ಪ್ರವೀಣ್ ಸೂದ್ ಹೆಸರು ಕೂಡ ಕೇಳಿ ಬಂದಿತ್ತು.
ಪ್ರಸ್ತುತ ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿಯು ಕೊನೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸೂದ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
1985ರ ಐಪಿಎಸ್ ಬ್ಯಾಚ್ ನ ಸೂದ್, ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಕರ್ನಾಟಕ ಕೇಡರ್‌ನ ಮೂರನೇ ಐಪಿಎಸ್ ಅಧಿಕಾರಿಯಾಗಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಸೂದ್ 2020 ಫೆಬ್ರವರಿ 1 ರಂದು ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ನೇಮಕಗೊಂಡಿದ್ದರು.