ಆನ್ ಲೈನ್ ಜೂಜಾಟಕ್ಕೆ ನಿಷೇಧ ಹೇರಲು ನಿರ್ಧರಿಸಿದ ಕರ್ನಾಟಕ ಸಚಿವ ಸಂಪುಟ

Prasthutha|

ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ಶನಿವಾರ ಲಾಟರಿ ಕುದುರೆ ರೇಸ್ ಹೊರತುಪಡಿಸಿ ಆನ್ ಲೈನ್ ಜೂಜು ಅಥವಾ ಬೆಟ್ಟಿಂಗ್ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ. ಆನ್ ಲೈನ್ ಬೆಟ್ಟಿಂಗ್ ಕುರಿತು ಸ್ಪಷ್ಟವಾದ ನಿಲುವು ತಾಳುವಂತೆ ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಸಚಿವ ಸಂಪುಟದಿಂದ ಈ ನಿರ್ಧಾರ ಹೊರಬಿದ್ದಿದೆ.

- Advertisement -

ಈ ಕುರಿತು ಸುದ್ದಿಗಾರರಿಗೆ ಮಾತನಾಡಿದ ಕರ್ನಾಟಕದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಯವರು ಆನ್ ಲೈನ್ ಜೂಜನ್ನು ನಿಷೇದಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕರ್ನಾಟಕದ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಕರಡು ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದೇ ರೀತಿ ನಾವು ಆನ್ ಲೈನ್ ನಲ್ಲಿ ಜೂಜಾಟವನ್ನು ಕೊನೆಗೊಳಿಸಲು ಬಯಸಿದ್ದೇವೆಂದು ಅವರು ತಿಳಿಸಿದರು.

ಈ ನಿಷೇಧವು ರಾಜ್ಯದ ಒಳಗೆ ಅಥವಾ ಹೊರಗಿನ ರೇಸ್ ಕೋರ್ಸ್ ನಲ್ಲಿ ನಡೆಯುವ ಕುದುರೆ ರೇಸ್ ಬೆಟ್ಟಿಂಗ್ ಒಳಗೊಂಡಿರುವುದಿಲ್ಲವೆಂದು ಮಾಧುಸ್ವಾಮಿ ತಿಳಿಸಿದರು. ಬೆಟ್ಟಿಂಗ್, ಟೋಕನ್, ಹಣ ಹಂಚುವಿಕೆ, ಎಲೆಕ್ಟ್ರಾನಿಕ್ ವಿಧಾನಗಳು, ವರ್ಚುವಲ್ ಕರೆನ್ಸಿ, ಹಣದ ಎಲೆಕ್ಟ್ರಾನಿಕ್ ರೂಪದಲ್ಲಿ ವರ್ಗಾವಣೆ ಸೇರಿದಂತೆ ಎಲ್ಲಾ ವಿಧದ ಆನ್ ಲೈನ್ ಆಟಗಳು ಈ ಕರಡು ವಿಧೇಯಕವು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

- Advertisement -

ಕಳೆದ ಜುಲೈನಲ್ಲಿ ಎಲ್ಲಾ ವಿಧದ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಾಟವನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಎಲ್ಲಾ ವಿಧದ ಆನ್ ಲೈನ್ ಆಟವನ್ನು ನಿಷೇಧಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಅದು ಮಸೂದೆಯಾಗಿ ರಚನೆಯಾಗಿದೆ ಎಂದು ಹೇಳಲಾಗುತ್ತಿದೆ.

ಕರಡು ಮಸೂದೆಯನ್ನು ಸೆಪ್ಟೆಂಬರ್ 13 ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದೆಂದು ಮಾಧುಸ್ವಾಮಿ ತಿಳಿಸಿದರು.

Join Whatsapp