ಬೆಂಗಳೂರು : ನೌಕರರ ಆರೋಗ್ಯ ರಕ್ಷಣೆಗಾಗಿ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಯೋಜನೆಯಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು – 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ನೌಕರರ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 7ನೇ ವೇತನ ಆಯೋಗವನ್ನು ರಚನೆ ಮಾಡಲು ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಪ್ರಮುಖ ಕಾರಣರು. ಈ ವರ್ಷದಲ್ಲಿ 7 ನೇ ವೇತನ ಆಯೋಗ ರಚಿಸಿ, ಸರ್ಕಾರಿ ನೌಕರರ ವೇತನದ ತಾರತಮ್ಯವನ್ನು ಸರಿದೂರಿಸಲು ತೀರ್ಮಾನಿಸಲಾಗಿದೆ. ಸರ್ಕಾರಿ ನೌಕರರು ಸಂತೋಷದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ರಾಜ್ಯದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಬಡವರ ಕೆಲಸ ನಿರ್ವಹಿಸಿ :
ಕರ್ನಾಟಕ ಪ್ರಗತಿಪರ ರಾಜ್ಯ. ರಾಜ್ಯ ಪ್ರಗತಿಪಥದಲ್ಲಿ ನಡೆಯಲು ಪ್ರಗತಿಪರ ಚಿಂತನೆ, ನಾಯಕತ್ವ ಮತ್ತು ಆಡಳಿತ ವ್ಯವಸ್ಥೆ ಇರಬೇಕು. ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸರ್ಕಾರಿ ನೌಕರರ ಕರ್ತವ್ಯ ಬಹಳ ಮುಖ್ಯ. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ, ನಿಮ್ಮ ಕೆಲಸ ಬಡವನಿಗೆ ಮುಟ್ಟಿದರೆ ಪುಣ್ಯಪ್ರಾಪ್ತಿಯೂ ಆಗುತ್ತದೆ. ನಿಗದಿತ ಸಮಯದಲ್ಲಿ ಬಡವರಿಗಾಗಿ ಇರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಆಸಕ್ತಿಯನ್ನು ವಹಿಸಬೇಕು. ಸರ್ಕಾರಿ ನೌಕರರು ಉತ್ತಮ ಸೇವೆ ಸಲ್ಲಿಸಿದರೆ, ಅವರಿಗೆ ಸವಲತ್ತುಗಳನ್ನು ನೀಡಲು ಯಾವ ತೊಂದರೆಯೂ ಇಲ್ಲ ಎಂದರು.
ರಾಜ್ಯದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಮಹತ್ವದ ಪಾತ್ರ:
ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಾಗಿದ್ದು, ರಾಜ್ಯವನ್ನು ಉನ್ನತ ಮಟ್ಟಕ್ಕೆ ತರಲು ಒಗ್ಗಾಟ್ಟಾಗಿ ದುಡಿಯಬೇಕು. ಆಳುವವರು ಮತ್ತು ಆಡಳಿತಕ್ಕೆ ಸಂಯೋಜನಾತ್ಮಕ ಸಂಬಂಧವಾಗಿದ್ದು, ಇವೆರಡೂ ಚಕ್ರಗಳು ರಾಜ್ಯದ ಪ್ರಗತಿಯ ರಥವನ್ನು ಮುನ್ನಡೆಸುತ್ತದೆ. ಅಂತಹ ರಾಜ್ಯ ಪ್ರಗತಿಯನ್ನು ಸಾಧಿಸುತ್ತದೆ. ರಾಜ್ಯ ಹಲವಾರು ರಂಗದಲ್ಲಿ ಹೆಸರು ಗಳಿಸಿದ್ದರೆ, ಅದರಲ್ಲಿ ಸರ್ಕಾರಿ ನೌಕರರ ಪಾಲು ದೊಡ್ಡದಿದೆ ಎಂದರು.
ಕೋವಿಡ್ ನ ಯಶಸ್ವಿ ನಿರ್ವಹಣೆ :
ಕೋವಿಡ್ ಸಾಂಕ್ರಾಮಿಕವನ್ನು ನಾಯಕರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಸರ್ಕಾರಿ ನೌಕರರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಕರೋನಾ ಯೋಧರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ರಾಜ್ಯ ಕೋವಿಡ್ ಸಂಕಷ್ಟದಿಂದ ಶೀಘ್ರದಲ್ಲಿ ಹೊರಬಂದು ಆರ್ಥಿಕ ಚೇತರಿಕೆ ಕಾಣಲು ಸಾಧ್ಯವಾಯಿತು. ವಿವಿಧ ತೆರಿಗೆಗಳಿಂದ 15000 ಕೋಟಿ ಆದಾಯವನ್ನು ಗಳಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಯಾವುದೇ ಕಡಿತವಿಲ್ಲದೇ ಪೂರ್ಣಪ್ರಮಾಣದ ವೇತನವನ್ನು ನೀಡುವ ತೀರ್ಮಾನ, ನಾಯಕರಾದ ಯಡಿಯೂರಪ್ಪಅವರಿಗೆ ಸರ್ಕಾರಿ ನೌಕರರ ಹಿತಾಸಕ್ತಿಯ ಪ್ರತೀಕವಾಗಿದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿಗೆ ಇಂಬು ನೀಡಲಾಗಿದೆ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಷಡಕ್ಷರಿಯವರ ನಾಯಕತ್ವದಿಂದ ಹೊಸ ಚೈತನ್ಯ ಬಂದಿದೆ. ಸಂಘದ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದರು.