ಕಾಪು: ಎಸ್ ಡಿಪಿಐ ಕಾರ್ಯಕರ್ತರ ಮಾನವೀಯ ಸೇವೆಯಿಂದಾಗಿ ಮರಳಿ ಮನೆ ಸೇರಿದ ಮಾನಸಿಕ ಅಸ್ವಸ್ಥ

Prasthutha|

ಉಡುಪಿ: ಕಳೆದ 14 ತಿಂಗಳಿನಿಂದ ಮನೆಯಿಂದ ಕಾಣೆಯಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಾ ಉಡುಪಿಗೆ ಬಂದು ಸೇರಿದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಸ್ಥಳೀಯ ಎಸ್ ಡಿಪಿಐ ಕಾರ್ಯಕರ್ತರ ಕಣ್ಣಿಗೆ ಬಿದ್ದ ಪರಿಣಾಮ ರಾಮನಗರದಲ್ಲಿರುವ ಅವರ ಕುಟುಂಬವನ್ನು ಮರಳಿ ಸೇರಿದ ಮಾನವೀಯ ಘಟನೆಯೊಂದು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

- Advertisement -

ಕಾಪು ಎಕ್ಸ್ ಪ್ರೆಸ್ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರು ಕುಳಿತಿರುವುದನ್ನು ಸ್ಥಳೀಯ ಎಸ್ ಡಿಪಿಐ ಸದಸ್ಯರಾದ ಅಬ್ದುಲ್ ರಝಾಕ್ ನೋಡಿದ್ದಾರೆ. ಆ ವ್ಯಕ್ತಿಯೊಂದಿಗೆ ಅಬ್ದುಲ್ ರಝಾಕ್ ಮಾತನಾಡಲು ಪ್ರಯತ್ನಿಸಿದಾಗ ಆತ ಮಾತನಾಡಲು ಸಿದ್ಧನಿರಲಿಲ್ಲ. ಒತ್ತಾಯಪಡಿಸಿದಾಗ ‘ತಾನು ಬೆಂಗಳೂರು ಮೂಲದವನಾಗಿದ್ದು, ಕಳೆದ ವರ್ಷದ ರಂಝಾನ್ ತಿಂಗಳಲ್ಲಿ ಮನೆ ಬಿಟ್ಟು ಬಂದಿದ್ದೇನೆ’ ಎಂದಷ್ಟೇ ಹೇಳಿದ್ದಾನೆ.

ಮನೆಯವರ ಮೊಬೈಲ್ ಸಂಖ್ಯೆ ನೆನಪಿದೆಯೇ ಎಂದು ಕೇಳಿದಾಗ, ಮೊಬೈಲ್ ಸಂಖ್ಯೆಯೊಂದನ್ನು ಆ ವ್ಯಕ್ತಿ ರಝಾಕ್ ಅವರಿಗೆ ಹೇಳಿದ್ದಾರೆ. ರಝಾಕ್ ಅವರು  ಆ ಸಂಖ್ಯೆಗೆ ಕರೆ ಮಾಡಿದಾಗ, ಅದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಬಾವ ಎಂಬುದು ಮನದಟ್ಟಾಗುತ್ತದೆ.

- Advertisement -

ಅಬ್ದುಲ್ ರಝಾಕ್ ಅವರು ನಡೆದ ಘಟನೆಯನ್ನೆಲ್ಲಾ ಅವರೊಂದಿಗೆ ಹೇಳಿದಾಗ, ಆತನಿಗೆ ಮಾನಸಿಕ ಸಮಸ್ಯೆ ಇದೆ. 14 ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಾನೆ. ನಾವು ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ನೀವು ಆತನನ್ನು ಜೋಪಾನವಾಗಿ ಇರಿಸಿ, ಈಗಲೇ ನಾವು ಉಡುಪಿಗೆ ಹೊರಡುತ್ತೇವೆ ಎಂದು ಹೇಳಿದ್ದಾರೆ.

ತಕ್ಷಣ ಅಬ್ದುಲ್ ರಝಾಕ್ ಮತ್ತು ತಂಡ, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸ್ ಠಾಣೆಗೆ ಕರೆದು ಕೊಂಡು ಬಂದಿದ್ದಾರೆ.

ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಪೊಲೀಸರು ಕೂಡ ಆತನ ಸ್ಥಿತಿ ಕಂಡು ಮರುಗಿದ್ದಾರೆ. ಸ್ನಾನ ಮಾಡದೆ ಎಷ್ಟೋ ತಿಂಗಳು ಕಳೆದುದರಿಂದ ಆತ ದುರ್ನಾತ ಬರುತ್ತಿರುವುದನ್ನು ಕಂಡ ಅಬ್ದುಲ್ ರಝಾಕ್ ಅವರು ಪೊಲೀಸ್ ವಾಹನದಲ್ಲೇ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ, ಊಟ ನೀಡಿ ಬಳಿಕ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಕಳೆದ ರಾತ್ರಿ ಸುಮಾರು 12ರ ಹೊತ್ತಿಗೆ ವ್ಯಕ್ತಿಯ ಸಂಬಂಧಿಕರು ರಾಮನಗರದಿಂದ ಕಾಪು ಪೊಲೀಸ್ ಠಾಣೆಗೆ ಬಂದಿದ್ದಾರೆ. 14 ತಿಂಗಳ ಬಳಿಕ ಮಗನನ್ನು ಕಂಡ ಪೋಷಕರ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ರಾತ್ರಿಯೇ ಪೊಲೀಸರ ಸಮ್ಮುಖದಲ್ಲಿ ವ್ಯಕ್ತಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

25 ವರ್ಷ ಪ್ರಾಯದ ಮಗನನ್ನು ಕಳೆದುಕೊಂಡು 14 ತಿಂಗಳಿಂದ ಕೊರಗುತ್ತಿದ್ದ ತಂದೆ ಸಯ್ಯದ್ ಅಜ್ಮಲ್ ಅವರು ಮಗನನ್ನು ಕಂಡೊಡನೆ ಆಲಿಂಗಿಸಿ ಮುತ್ತಾಡಿದ ದೃಶ್ಯ ಅಲ್ಲಿದ್ದವರ ಕಣ್ಣುಗಳನ್ನೂ ಒದ್ದೆಯಾಗಿಸಿತು.

ಈ ಮಾನವೀಯ ಸೇವೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತ ಅಬ್ದುಲ್ ರಝಾಕ್, ಡಿವಿಷನ್ ಸಂಘಟನಾ ಕಾರ್ಯದರ್ಶಿ ಸ್ವಾದಿಕ್ ಕೆ.ಪಿ, SDTU ಉಡುಪಿ ಜಿಲ್ಲಾಧ್ಯಕ್ಷ ಶಮೀರ್ SMS, ಹಾಗೂ ಪೊಲೀಸ್ ಅಧಿಕಾರಿಗಳಾದ PSI ಭರತೇಶ್, PSI ನಿರಂಜನ್, ನಾರಾಯಣ, ಶ್ರೀನಿವಾಸ,ವಿಕ್ರಮ್, ಶಿವಾನಂದಪ್ಪ ಭಾಗಿಯಾಗಿದ್ದರು.

Join Whatsapp