ಕೋವಿಡ್-19 ಸಂಕಷ್ಟದ ವೇಳೆ ಯು.ಎ.ಇ.ನಲ್ಲಿ ನೆಲೆಸಿರುವ ಕನ್ನಡಿಗರ ಸೇವೆ ಶ್ಲಾಘನೀಯ: ಸಚಿವ ಬಿ.ಸಿ ನಾಗೇಶ್

Prasthutha|

ದುಬೈ : ಕೋವಿಡ್ -19 ಸಂದರ್ಭದಲ್ಲಿ ಸಂಕಷ್ಟಕ್ಕೆ ತುತ್ತಾದವರಿಗೆ ಯು.ಎ.ಇ ಅನಿವಾಸಿ ಭಾರತೀಯರು, ಕನ್ನಡಿಗರ ನೆರವಿನ ಕಾರ್ಯಗಳು ಶ್ಲಾಘನೀಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ಹೇಳಿದರು.

- Advertisement -

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ ಮತ್ತು ಯು.ಎ.ಇ.ನ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದುಬೈನಲ್ಲಿರುವ ಇಂಡಿಯನ್ ಹೈಸ್ಕೂಲ್‌ನಲ್ಲಿ ಶುಕ್ರವಾರ (ನ‌.12) ಆಯೋಜಿಸಿದ್ದ ‘66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ’ದಲ್ಲಿ ವಿಶೇಷ ಅತಿಥಿಯಾಗಿ
ಭಾಗವಹಿಸಿ ಸಚಿವರು ಮಾತನಾಡಿದರು.

‘ಕೋವಿಡ್-19ನಿಂದ ಇಡೀ ಜಗತ್ತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದೆ. ಯು.ಎ.ಇ.ನಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರು ಮತ್ತು ಇನ್ನಿತರ ರಾಷ್ಟ್ರಗಳ ಪ್ರಜೆಗಳಿಗೂ ಯು.ಎ.ಇ.ನಲ್ಲಿ ನೆಲೆಸಿರುವ ಕನ್ನಡಿಗರ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ನೆರವಾಗಿವೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ತಾಯ್ನಾಡಿಗೆ ಮರಳಲು ಬಯಸಿದವರು ಸೇರಿದಂತೆ ಎಲ್ಲರಿಗೂ ಕನ್ನಡ ಸಂಘಟನೆಗಳು ನೆರವಾಗಿವೆ. ಕಷ್ಟದಲ್ಲಿ ಇರುವವರಿಗೆ ನೆರವಾಗುವ ಮನೋಭಾವವೂ ಸಾವಿರಾರು ವರ್ಷಗಳಿಂದ ನಮ್ಮ ನಾಡಿನ ಜನತೆಗೆ ರಕ್ತಗತವಾಗಿ ಬಂದಿದೆ’ ಎಂದು ಬಿ.ಸಿ. ನಾಗೇಶ್ ನುಡಿದರು.

- Advertisement -

‘ಭಾರತ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ. ಭಾರತೀಯ ಜೀವನ ಪದ್ಧತಿಯನ್ನು ಮತ್ತೊಂದು ರಾಷ್ಟ್ರದ ಮೇಲೆ ಹೇರಲು ಪ್ರಯತ್ನಿಸಿಲ್ಲ. ಆದರೆ, ಹಲವು ರಾಷ್ಟ್ರಗಳು, ನಾಗರಿಕರು ಭಾರತೀಯ ಜೀವನ ಪದ್ಧತಿ, ಭಾರತೀಯರ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದಾರೆ. ಭಾರತೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಸೇವಾ ಮನೋಭಾವದ ಮೂಲಕ ಅನಿವಾಸಿ ಭಾರತೀಯರು ಕರ್ನಾಟಕ, ಭಾರತದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೊಗುತ್ತಿದ್ದಾರೆ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಉದ್ಯೋಗ ಸೇರಿದಂತೆ ಇನ್ನಿತರ ಕಾರಣಗಳಿಗೆ ಯು.ಎ.ಇ.ಗೆ ಬಂದು, ನೆಲಸಿದ್ದರೂ ಭಾರತೀಯ ಜೀವನ ಪದ್ಧತಿ, ಸಂಸ್ಕೃತಿ, ಕನ್ನಡತನವನ್ನು ಬಿಟ್ಟುಕೊಡದೆ ಮಾತೃಭೂಮಿಯ ಕುರಿತು ಅಭಿಮಾನದ ಜೊತೆಗೆ ಭಾಷೆ, ಭೋಜನ ಮತ್ತು ಭೂಷಣಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದು ಸಂತೋಷದ ಸಂಗತಿ’ ಎಂದು ಸಚಿವರು ಹೇಳಿದರು.

ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡುವ ‘ಕನ್ನಡ ಪಾಠಶಾಲೆ’ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ‘ಕನ್ನಡ ಸುಗ್ಗಿ-8’ರ ತರಗತಿಗೆ ಸಚಿವ ಬಿ.ಸಿ ನಾಗೇಶ್ ಚಾಲನೆ ನೀಡಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವರು ವೀಕ್ಷಿಸಿದರು.

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕೌನ್ಸಿಲ್ ಜನರಲ್ ಆಫ್ ಇಂಡಿಯಾ- ದುಬೈನ ಅಮನ್ ಪುರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Join Whatsapp