ಕನ್ನಡಿಗರಿಗೆ ತಮ್ಮ ನಿಜ ಶಕ್ತಿ ಅರಿವಾಗಬೇಕಿದೆ: ನಾಡೋಜ ಡಾ.ಮಹೇಶ ಜೋಶಿ

Prasthutha|

ಬೆಂಗಳೂರು: ಕನ್ನಡಿಗರು ಆಂಜನೇಯನ ವಂಶಸ್ಥರು, ಆಂಜನೇಯನಿಗಿರುವ ಅಗಾಧವಾದ ಶಕ್ತಿಯ ಬಗ್ಗೆ ಅರಿವು ಮಾಡಿಕೊಡಲು ಜಾಂಬುವಂತ ಬರಬೇಕಾಯ್ತು. ಹಾಗೆಯೇ ಕನ್ನಡಿಗರಿಗೆ ನಮ್ಮ ನಿಜವಾದ ಶಕ್ತಿಯ ಅರಿವು ನಮಗಿಲ್ಲ. ನಮ್ಮ ಕನ್ನಡ ಶಕ್ತಿಯ ಬಗ್ಗೆ ಎಚ್ಚರಿಸಲು ಮತ್ತೊಬ್ಬರು ಬರಬೇಕಾದ ದುಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ನಾನು ಆಶಾವಾದಿ, ಭವಿಷ್ಯದಲ್ಲಿ ನಂಬಿಕೆ ಇದೆ. ಸರಕಾರದ ಜೊತೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ- 2022ʼ ತರುವುದಕ್ಕೆ ಮುಂದಾಗಿದೆ. ಅದು ಮುಂದಿನ ಅಧಿವೇಶನದಲ್ಲಿ ಕಾನೂನಾಗಲಿದೆ. ಇದರಿಂದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸೂಕ್ತ ಅರ್ಥಬರಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

- Advertisement -

ಇಂದು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 67ನೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡೋಜ ಡಾ. ಮಹೇಶ ಜೋಶಿ ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ಪರಿಷತ್ತಿನ ಆವರಣದಲಿ ಕನ್ನಡ ಧ್ವಜಾರೋಹಣ ನಡೆಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಹಮ್ಮಿಕೊಂಡ ಕರ್ನಾಟಕ ಏಕಿಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯುಕ್ರಮದಲ್ಲಿ ಮಾತನಾಡಿದರು.

ಕನ್ನಡಕ್ಕೆ ಅನ್ಯ ಭಾಷಿಗರ ಕೊಡುಗೆ ಅನನ್ಯ. ಕನ್ನಡಿಗರಲ್ಲದಿದ್ದರೂ ಹುಟ್ಟಿದ್ದು ಕನ್ನಡ ನಾಡಿನಲ್ಲಿ ಎನ್ನುವ ಅಭಿಮಾನದಿಂದ ಕನ್ನಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಕನ್ನಡದ ಆಸ್ತಿಯಾಗಿರುವ ಮಾಸ್ತಿಯವರದ್ದು ಮಾತ್ರ ಭಾಷೆ ತಮಿಳು, ಕನ್ನಡದ ಭಗವದ್ಗೀತೆ ಎನಿಸಿಕೊಂಡ ಮಂಕುತಿಮ್ಮನ ಕಗ್ಗ ಬರೆದ ಡಿವಿಜಿ ಅವರ ಮಾತೃಭಾಷೆ ಕನ್ನಡವಲ್ಲ. ವರ ಕವಿ ಬೇಂದ್ರೆಯವರ ಮಾತ್ರ ಭಾಷೆ ಮರಾಠಿ, ನಾ.ಕಸ್ತೂರಿ ಅವರದ್ದು ಮಾತೃಭಾಷೆ ಮಲೆಯಾಳಂ, ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಮಾರ್ಕ್ ಕಬ್ಬನ್ ಅವರು ಕನ್ನಡಿಗರಲ್ಲ, ಕನ್ನಡಕ್ಕೆ ನಿಘಂಟು ನೀಡಿದ ಫೆಡರಲ್ ಕಿಟ್ಟಲ್ ಮಾತ್ರ ಭಾಷೆ ಜರ್ಮನ್. ಇವರೆಲ್ಲಾ ಕನ್ನಡದಲ್ಲಿ ಇರುವ ಶಕ್ತಿಯನ್ನು ಕಂಡು ಕೊಂಡಿದ್ದರು. ಕನ್ನಡಕ್ಕೆ ದೇವರನ್ನು ಒಲಿಸುವ ಶಕ್ತಿ ಇದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ಉಡುಪಿಯ ಕೃಷ್ಣನಿಗೆ ʻ ಇಂದು ಎನಗೆ ಗೋವಿಂದ ನಿನ್ನೆಯ ಪಾದಾರವಿಂದವ, ತೋರೋ ಮುಕುಂದನೆ ʼ ಎಂದು ಕನ್ನಡದಲ್ಲಿ ಹಾಡಿದಾಗ ಶ್ರೀಕೃಷ್ಣ ಪ್ರತ್ಯಕ್ಷನಾದ. ಅದೆ ರೀತಿ ಭಕ್ತ ಕನಕದಾಸರು ಅದೇ ಉಡುಪಿಯಲ್ಲಿ ʻ ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇʼ ಎಂದು ಹಾಡಿದಾಗ ಶ್ರೀಕೃಷ್ಣ ದಿಕ್ಕನ್ನು ಬದಲಿಸಿ ಪ್ರತ್ಯಕ್ಷನಾದ. ಭಗವಂತನ ದರ್ಶನವನ್ನೂ ಪಡೆಯಬಲ್ಲ ಶಕ್ತಿ ನಮ್ಮ ಕನ್ನಡಕ್ಕಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

- Advertisement -

ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಈ ವಿಷಯದ ಕುರಿತು ಮಾತನಾಡಿದ ಹಿರಿಯ ಇತಿಹಾಸ ತಜ್ಞ ಡಾ. ಎಚ್.ಎಸ್.ಗೋಪಾಲರಾವ್ ಅವರು ಮಾತನಾಡಿ, ಹರಿದು ಹಂಚಿ ಹೋಗಿದ್ದ ಕನ್ನಡನಾಡನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಕೊಡುಗೆ ನೀಡಿದೆ. ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನಗಳೂ ಏಕೀಕರಣದ ಕಹಳೆಯನ್ನು ಊದುತ್ತಲೇ ಬಂದವು. ಕನ್ನಡಿಗರನ್ನು ಒಟ್ಟುಗೂಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಹಳ ಮುಖ್ಯ ಪಾತ್ರವನ್ನು ವಹಿಸಿದೆ. ಆದರೂ ಏಕೀಕರಣದ ಪೂರ್ಣ ಉದ್ದೇಶ ಇನ್ನೂ ಈಡೇರಿಲ್ಲ. ಅಚ್ಚ ಕನ್ನಡ ಪ್ರದೇಶಗಳಾದ ಕಾಸರಗೋಡು, ಸೊಲ್ಲಾಪುರ, ಅಕ್ಕಲಕೋಟೆ ಹಲವು ಭಾಗಗಳು ಇನ್ನೂ ಕರ್ನಾಟಕದಿಂದ ಹೊರಗೆ ಉಳಿದಿವೆ. ಇವನ್ನು ಸೇರಿಸಿ ಸಮಗ್ರ ಕರ್ನಾಟಕ ರೂಪುಗೊಳ್ಳುವಲ್ಲಿ ನಾಡೋಜ ಡಾ. ಮಹೇಶ ಜೋಶಿಯವರ ಕ್ರಿಯಾಶಿಲ ನಾಯಕತ್ವದ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಪಾತ್ರ ವಹಿಸಲಿ ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಹಿನ್ನೆಲೆಯಲ್ಲಿ ತಳಮಟ್ಟದ ಕನ್ನಡದ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪರಿಷತ್ತು ಮಾಡುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗಾರ ಹಾಗೂ ಕನ್ನಡ ಪರಿಚಾರಕರಾದ ಗಾರೆ ಮಹದೇವ ಅವರನ್ನು ಇದೇ ಕಾಯಕ್ರಮದಲ್ಲಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ ರಾಮಲಿಂಗ ಶೆಟ್ಟಿ ಸ್ವಾಗತಿಸಿದರು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ಪಾಂಡು ವಂದಿಸಿದರು. ಗೌರವ ಕಾರ್ಯದರ್ಶಿ ಕೆ. ಮಹಾಲಿಂಗಯ್ಯ ಕಾರ್ಯಕ್ರಮ ನಿರ್ವಹಿಸಿದರು.



Join Whatsapp