ಮಕ್ಕಳ ಸಾಹಿತ್ಯಕ್ಕೆ ತೆರೆದುಕೊಳ್ಳುತ್ತಿರುವ ಕನ್ನಡ ಬರಹಲೋಕ: ಚಹ. ರಘುನಾಥ

ಬೆಂಗಳೂರು: ಮಕ್ಕಳ ಸಾಹಿತ್ಯಕ್ಕೆ ಈ ವರ್ಷ ಸಮೃದ್ಧಿಯ ವರ್ಷವಾಗಿ ಪರಿಣಮಿಸಿದೆ. ಮಕ್ಕಳ ಸಾಹಿತ್ಯಕ್ಕೆ ಕನ್ನಡ ಬರಹಾಲೋಕ ತೆರೆದುಕೊಳ್ಳುತ್ತಿದೆ ಎಂಬುದಕ್ಕೆ ಇಂದು ಬಿಡುಗಡೆಯಾದ ವಸಂತ ಬಾಲ ಸಾಹಿತ್ಯ ಮಾಲೆʼಯ 12 ಮಕ್ಕಳ ಕೃತಿಗಳ ಲೋಕಾರ್ಪಣೆಯೇ ಸಾಕ್ಷಿ. ಮಕ್ಕಳ ಸಾಹಿತ್ಯಕ್ಕಿದ್ದ ಕೆಲವೊಂದು ಕೊರತೆಗಳನ್ನು ಈ ಕೃತಿಗಳು ದೂರ ತರಿಸಿದೆ ಎನ್ನಲು ಸಂತಸವಾಗುತ್ತದೆ ಎಂದು ಪತ್ರಕರ್ತ ಚ.ಹ. ರಘುನಾಥ್ ಹೇಳಿದರು.
ಅವರು ಬೆಂಗಳೂರಿನ ವಸಂತ ಪ್ರಕಾಶನ ಮತ್ತು ಬುಕ್ ಬ್ರಹ್ಮ ಅವರ ಜಂಟಿ ಆಶ್ರಯದಲ್ಲಿ ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ಸಂಪಾದಿಸಿರುವ ʻವಸಂತ ಬಾಲ ಸಾಹಿತ್ಯ ಮಾಲೆʼಯ 12 ಮಕ್ಕಳ ಕೃತಿಗಳ ಆನ್ಲೈನ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳ ಕುರಿತು ಮಾತನಾಡಿದರು.
ಇಲ್ಲಿನ ಕೃತಿಗಳು ಮಕ್ಕಳಿಗಷ್ಟೇ ಅಲ್ಲದೇ ಎಲ್ಲಾ ವಯೋಮಾನದ ಓದುಗರಿಗೂ ಪೂರಕವಾಗಿದೆ. ಇಲ್ಲಿನ ಲೇಖಕರ ಪದ ಚಮತ್ಕಾರ ಮತ್ತು ಭಾಷಾ ಚಮತ್ಕಾರ ಉತ್ತಮವಾಗಿ ಮೂಡಿಬಂದಿದೆ. ಈ ಕಾಲಕ್ಕೆ ಅಗತ್ಯವಾದ ಪರಿಸರ ಪ್ರೀತಿಯನ್ನು ಕೃತಿಯುದಕ್ಕೂ ಸುಂದರವಾಗಿ ತಿಳಿಸಿಕೊಡಲಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಇಲ್ಲಿನ ನಾಟಕಗನ್ನು ಇಂದಿನ ಎಲ್ಲಾ ಮಕ್ಕಳು ಓದುವ ಜೊತೆಗೆ ಅಭಿನಯಿಸಬೇಕಾದ ರೀತಿಯಲ್ಲೇ ಹೆಣೆಯಲಾಗಿದೆ. ಇಲ್ಲಿ ಮೂಡಿಬಂದಿರುವ ಭಾಷೆಗಳು ಸೊಗಸಾಗಿ ಮತ್ತು ಕಾವ್ಯಕ್ಕೆ ಸಮೀಪವಾಗಿರುವ ಭಾಷೆಯಾಗಿ ಮೂಡಿಬಂದಿರುವುದು ಸಂತಸದ ಸಂಗತಿ. ಇಂತಹ ಅನೇಕ ಕೃತಿಗಳು ಇನ್ನಷ್ಟು ಸಾಹಿತ್ಯ ಲೋಕಕ್ಕೆ ಮೂಡಿಬರಲಿ ಎಂದು ಅವರು ಅಭಿಪ್ರಾಯಪಟ್ಟರು.
ಪುಸ್ತಕ ಲೋಕಾರ್ಪಣೆಗೊಳಿಸಿದ ಹಿರಿಯ ಕವಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿದ ಮಕ್ಕಳ ಸಾಹಿತ್ಯ ಸಂಪಾದನಾ ಕಾರ್ಯವನ್ನು ಮೊದಲು ಪ್ರಾರಂಭಿಸಿದವರು ಬೊಳುವಾರು ಮುಹಮ್ಮದ್ ಕುಂಞಿಯವರು. ಅದನ್ನು ಎಚ್.ಎಸ್. ವೆಂಕಟೇಶ ಮೂರ್ತಿಯವರು ಅದನ್ನು ಇನ್ನಷ್ಟು ವಿಸ್ತರಿಸಿ ಹನ್ನೆರಡು ಸಂಪುಟಗಳನ್ನು ಇಂದು ನಮ್ಮ ಮುಂದಿಟ್ಟಿದ್ದಾರೆ. ಇದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ. ಕನ್ನಡದ ನವೋದಯ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಂದು ಬಿಡುಗಡೆಯಾದ ಕೃತಿಗಳೇ ಸಾಕ್ಷಿ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಲೋಕ ಹೊಸ ವಿಧದತ್ತ ತೆರೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ನಾಗಾಭರಣ ಮಾತನಾಡಿ ಮಕ್ಕಳ ಸಾಹಿತ್ಯ ಲೋಕಕ್ಕೆ ಹನ್ನೆರಡು ಕೃತಿಗಳು ಒಂದೇ ದಿನ ಲೋಕಾರ್ಪಣೆಗೊಂಡದ್ದು ಸುಲಭದ ಸಂಗತಿಯಲ್ಲ. ಈ ನಿಟ್ಟಿನಲ್ಲಿ ಇಂತಹ ಕೃತಿಗಳು ಮಕ್ಕಳ ಮನಸ್ಸನ್ನು ತಲುಪುವಂತೆ ಮಾಡುವುದು ಕೂಡ ಪ್ರತಿಯೊಬ್ಬ ಪೋಷಕರ ಕರ್ತವ್ಯ. ಶಿಕ್ಷಣದಲ್ಲೇ ಕನ್ನಡವನ್ನು ಒತ್ತಾಸೆಯಾಗಿಯೇ ಹಿಡಿಯುವಂತ ಸನ್ನಿವೇಶದಲ್ಲಿ ನಾವಿರುವಾಗ ವಸಂತ ಪ್ರಕಾಶನ ಈ ಮಹತ್ಕಾರ್ಯ ಕೈಗೊಂಡದ್ದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಡಾ. ಕೆ.ವಿ. ತುರುಮಲೇಶ್ ಅವರ ‘ಪುಟ್ಟನ ಮನ’, ಡಾ. ಬಸು ಬೇವಿನಗಿಡದ ಅವರ ‘ಒಳ್ಳೆಯ ದೆವ್ವ’, ಎಚ್. ಡುಂಡಿರಾಜ್ ಅವರ ‘ಕಾಳಿಗುಡ್ಡದ ಕೌತುಕ’, ಚಿಂತಾಮಣಿ ಕೊಡ್ಲೆಕೆರೆ ಅವರ ‘ಓಕೆ ಮೇಕೆ’, ಎನ್. ಶ್ರೀನಿವಾಸ ಉಡುಪ ಅವರ ‘ಪಾಪು,ಪದ್ಯಗಳು ಮತ್ತು ಓಬಿರಾಯನ ಕಥೆ’, ರಾಧೇಶ ತೋಳ್ಪಾಡಿ ಎಸ್ ಅವರ ‘ನವಿಲ ಕರುಣೆ’, ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರ ‘ಗುಬ್ಬಿ ಜಂಕ್ಷನ್’, ಜಿ. ಎನ್. ರಂಗನಾಥ ರಾವ್ ಅವರ ‘ಟಾಮಿಯ ಪ್ರಚಂಡ ಸಾಹಸಗಳು’, ಟಿ.ಎಸ್. ನಾಗರಾಜ ಶೆಟ್ಟಿ ಅವರ ‘ನರಿಯಣ್ಣನ ಅಂಗಡಿ’ ಕೃತಿಗಳು ಲೋಕಾರ್ಪಣೆಗೊಂಡು ಗಮನ ಸೆಳೆಯಿತು.
ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಪ್ರಸ್ತಾವಿಸಿದರು. ನಿರೂಪಕಿ ರಂಜಿತಾ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು

- Advertisement -