ಧರ್ಮ ನಿಂದನೆ: ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ ಕನ್ನಯ್ಯ ಲಾಲ್

Prasthutha|

ಉದಯಪುರ: ಧರ್ಮ ನಿಂದನೆಯ ದೂರಿನಡಿ ಎಫ್ ಐಆರ್ ದಾಖಲಾಗಿ ಕನ್ಹಯ್ಯ ಲಾಲ್ ಬಂಧನಕ್ಕೊಳಗಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಆತ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೂಡ ಕೇಳಿದ್ದ ಎಂದು ಕಾನೂನು ಸುವ್ಯವಸ್ಥೆ ಎಡಿಜಿ ಹವಾ ಸಿಂಗ್ ಗುಮಾರಿಯಾ ಹೇಳಿದ್ದಾರೆ.

- Advertisement -


ಜೂನ್ 10ರಂದು ಅನ್ಯ ಧರ್ಮ ನಿಂದನೆ ದೂರಿನಡಿ ಆತನ ಬಂಧನವಾಗಿತ್ತು. ಮರುದಿನ ಆತನು ಜಾಮೀನಿನ ಮೇಲೆ ಹೊರಗೆ ಬಂದಿದ್ದ.
“ಜೂನ್ 15ರಂದು ನನಗೆ ಕೊಲೆ ಬೆದರಿಕೆ ಬರುತ್ತಿರುವುದರಿಂದ ಪೊಲೀಸ್ ರಕ್ಷಣೆ ಬೇಕು ಎಂದು ದೂರು ಬರೆದು ಕೊಟ್ಟಿದ್ದ. ಬೆದರಿಸಿದವರನ್ನು ಕರೆಸಿ ಎರಡೂ ಕಡೆಯ ಆರೇಳು ಜನ ಜವಾಬ್ದಾರಿ ವ್ಯಕ್ತಿಗಳನ್ನು ಕೂರಿಸಿ ಮಾತನಾಡಿ ಒಂದು ಒಪ್ಪಂದಕ್ಕೆ ಬರಲಾಯಿತು. ಆಗ ಕನ್ಹಯ್ಯ ಲಾಲ್ ನನಗೆ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದು ಬೇಕಾಗಿಲ್ಲ ಎಂದು ಬರೆದು ಕೊಟ್ಟಿದ್ದ. ಆದ್ದರಿಂದ ಪೊಲೀಸರು ಆ ಸಂಬಂಧದ ವಿಚಾರಗಳನ್ನು ಕೈಬಿಟ್ಟಿದ್ದರು” ಎಂದು ಎಡಿಜಿ ಮಾಹಿತಿ ನೀಡಿದರು.


ಕೊಂದವರು ತಾವೇ ಎಂದು ಉದಯಪುರದ ಮುಹಮ್ಮದ್ ರಿಯಾಝ್ ಮತ್ತು ಗೌಸ್ ಮುಹಮ್ಮದ್ ಹೇಳಿದ್ದಾರೆ.
ಕನ್ಹಯ್ಯಲಾಲ್ ಮೇಲೆ ಉದಯಪುರ ನಿವಾಸಿ ನಝೀಮ್ ಅಹ್ಮದ್ ಧರ್ಮ ನಿಂದನೆಯ ದೂರು ನೀಡಿದ್ದು, ಅದು ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಎಫ್ ಐಆರ್ ಹೊರಡಿಸಲಾಗಿತ್ತು. ಐಪಿಸಿ ಸೆಕ್ಷನ್ 295 ಮತ್ತು 153ಎ ಅಡಿ ಮೊಕದ್ದಮೆ ಹೂಡಲಾಗಿತ್ತು.
ಪ್ರವಾದಿವರ್ಯರ ಬಗ್ಗೆ ಅವಹೇಳನಕಾರಿ ಅಭಿಪ್ರಾಯ ಪ್ರಕಟಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕನ್ಹಯ್ಯ ಲಾಲ್ ಬಂಧನ ಮತ್ತು ಮರುದಿನ ಜಾಮೀನು ಪಡೆದುದನ್ನು ಧನ್ಮಂಡಿ ಠಾಣೆಯ ಠಾಣಾಧಿಕಾರಿ ಗೋವಿಂದ್ ಸಿಂಗ್ ದೃಢ ಪಡಿಸಿದ್ದಾರೆ.



Join Whatsapp