ನಿತೀಶ್ ಕುಮಾರ್ ಆಪ್ತನ ಭೇಟಿ| ಕನ್ಹಯ್ಯ ಕುಮಾರ್ ಜೆಡಿಯು ಸೇರ್ಪಡೆ ವದಂತಿ

Prasthutha|

- Advertisement -

ಪಾಟ್ನಾ: ಸಿಪಿಐ ಯುವ ನಾಯಕ ಕನ್ಹಯ್ಯ ಕುಮಾರ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಮತ್ತು ಸಚಿವರಾದ ಅಶೋಕ್ ಚೌಧರಿಯನ್ನು ಭೇಟಿಯಾಗಿದ್ದಾರೆ. ಇದರೊಂದಿಗೆ ಕನ್ಹಯ್ಯ ಕುಮಾರ್ ಜೆಡಿಯುಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಡತೊಡಗಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸಿಪಿಐ ಕೇಂದ್ರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಆದರೆ ಕನ್ಹಯ್ಯ  ಕೆಲವು ಸಮಯದಿಂದ ರಾಜ್ಯ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದ ಪಕ್ಷದ ನಾಯಕತ್ವ ಸಭೆ ಯುವ ನಾಯಕನ ವಿರುದ್ಧ ಶಿಸ್ತು ನಿರ್ಣಯವನ್ನು ಮಂಡಿಸಿತ್ತು. ಕನ್ಹಯ್ಯ ಅವರ ಬೆಂಬಲಿಗರು ಸಿಪಿಐ ಪಾಟ್ನಾ ಕಚೇರಿ ಕಾರ್ಯದರ್ಶಿ ಇಂದೂ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿರುವುದರಿಂದ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ 110 ಪ್ರತಿನಿಧಿಗಳಲ್ಲಿ ಕೇವಲ ಮೂವರು ಕನ್ಹಯ್ಯಾ ಅವರನ್ನು ಬೆಂಬಲಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಕನ್ಹಯ್ಯಾಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಟಿಕೆಟ್ ನೀಡಲಿಲ್ಲ.

- Advertisement -

ಯಾರು ಈ ಅಶೋಕ್ ಚೌಧರಿ?

 ಇತರ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರುವಲ್ಲಿ ಹೆಸರು ಗಳಿಸಿದವರಾಗಿದ್ದಾರೆ ಅಶೋಕ್ ಚೌಧರಿ. ಅವರು ಇತ್ತೀಚೆಗೆ ಬಿಎಸ್ಪಿಯ ಏಕೈಕ ಶಾಸಕ ಸಮಾ ಖಾನ್ ಮತ್ತು ಪಕ್ಷೇತರ ಶಾಸಕ ಸುಮಿತ್ ಸಿಂಗ್ ಅವರನ್ನು ಎನ್‌ಡಿಎಗೆ ಕರೆತಂದಿದ್ದರು.ಇತ್ತೀಚಿನ ಕ್ಯಾಬಿನೆಟ್ ಪುನಾರಚನೆಯಲ್ಲಿ ಅವರು ಸ್ಥಾನ ಪಡೆದಿದ್ದರು. ಕಳೆದ ವಾರ ಚೌಧರಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಏಕೈಕ ಶಾಸಕ ರಾಜ್‌ಕುಮಾರ್ ಸಿಂಗ್ ಅವರನ್ನು ಪುಸ್ತಕ ಬಿಡುಗಡೆಗಾಗಿ ತಮ್ಮ ಮನೆಗೆ ಆಹ್ವಾನಿಸುವ ಮೂಲಕ ರಾಜಕೀಯ ವಲಯವನ್ನೇ ಬೆರಗಾಗಿಸಿದ್ದರು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ರಾಜ್ಯ ರಾಜಕೀಯದಲ್ಲಿ ಜೆಡಿಯುವಿನೊಂದಿಗೆ ಭಿನ್ನತೆ ಇರುವ ಪಕ್ಷವಾಗಿದೆ.

ಕನ್ಹಯ್ಯ ಕಮ್ಯುನಿಸ್ಟ್ ಸಿದ್ಧಾಂತವನ್ನು ತ್ಯಜಿಸಿ ಶಿಸ್ತುಬದ್ಧ ಕಾರ್ಯಕರ್ತನಾಗಿ ಬದಲಾದರೆ  ಅವರನ್ನು ಪಕ್ಷಕ್ಕೆ ಸ್ವಾಗತಿಸಲಿದ್ದೇವೆ ಎಂದು ಜೆಡಿಯು ವಕ್ತಾರ ಅಜಯ್ ಅಲೋಕ್  ಹೇಳಿದ್ದಾರೆ.



Join Whatsapp