ನವದೆಹಲಿ: ಕಾಂಗ್ರೆಸ್ ಎಂಬುದು ಕೇವಲ ಪಕ್ಷವಲ್ಲ, ಅದೊಂದು ಸಿದ್ಧಾಂತವಾಗಿದೆ. ಈ ನಿಟ್ಟಿನಲ್ಲಿ ನಾನು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ಕನ್ಹಯ್ಯಾ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಬೃಹತ್ ಹಡಗಿದ್ದಂತೆ. ಅದನ್ನು ಉಳಿಸಿದರೆ ಅನೇಕ ಜನರ ಆಕಾಂಕ್ಷೆಗಳನ್ನು ರಕ್ಷಣೆ ಮಾಡಬಹುದೆಂಬ ವಿಶ್ವಾಸದಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ಕಲ್ಪನೆಯೊಂದಿಗೆ ಮುಂದೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ನಾನು ಈ ಪಕ್ಷವನ್ನು ಸೇರಿದೆ ಎಂದು ಕನ್ಹಯ್ಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವೇಳೆ ಉಪಸ್ಥಿತರಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಕನ್ಹಯ್ಯಾ ಕುಮಾರ್ ಅವರನ್ನು ಪಕ್ಷದ ಧ್ವಜವನ್ನು ಹಸ್ತಾಂತರಿಸಿ ಸಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ತಾಂತ್ರಿಕ ಕಾರಣಗಳಿಂದ ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರಲು ಆಗುತ್ತಿಲ್ಲ. ಆದರೆ, ಈ ಪಕ್ಷಕ್ಕೆ ನನ್ನ ಬೆಂಬಲ ಮುಂದುವರೆಯುತ್ತದೆ ಹಾಗೂ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಮೂಲಕ ಎದುರಿಸುತ್ತೇನೆ ಎಂದರು.
ಇನ್ನು ಕನ್ಹಯ್ಯಾ ಹಾಗೂ ಜಿಗ್ನೇಶ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಅಕ್ಟೋಬರ್ 2 ರಂದು ಇವರಿಬ್ಬರು ‘ಕೈ’ ಹಿಡಿಯಲಿದ್ದಾರೆ ಎನ್ನಲಾಗುತ್ತಿತ್ತು. ಅದಕ್ಕೂ ಮುನ್ನವೇ ಕನ್ಹಯ್ಯಾ ಕಾಂಗ್ರೆಸ್ ಸೇರಿದ್ದು, ಜಿಗ್ನೇಶ್ ಮುಂದಿನ ಚುನಾವಣೆ ವೇಳೆ ಪಕ್ಷ ಸೇರುವುದಾಗಿ ಹೇಳಿದ್ದಾರೆ.