ಮುಂಬೈ: ಪ್ರಸಿದ್ಧ ಚಲನಚಿತ್ರ ಸಾಹಿತಿ ಜಾವೇದ್ ಅಖ್ತರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ಮುಂಬೈನ ನ್ಯಾಯಾಲಯವೊಂದು ಮುಂದಿನ ವಿಚಾರಣೆಯ ವೇಳೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಆಕೆಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರಿಪಬ್ಲಿಕ್ ಟಿವಿಯಲ್ಲಿ ನಿರೂಪಕ ಅರ್ನಾಬ್ ಗೋಸ್ವಾಮಿ ನಡೆಸಿಕೊಟ್ಟ ಸಂದರ್ಶನದ ವೇಳೆ ಕಂಗನಾ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಂದರ್ಶನದ ವೇಳೆ ಕಂಗನಾ ಅವರು, ಅಖ್ತರ್ ಅವರು “ಬಾಲಿವುಡ್ ನ ಸೂಯಿಸೈಡ್ ಗ್ಯಾಂಗ್ ನ ಭಾಗ” ಎಂದಿದ್ದರು. ಅವರು “ಏನನ್ನು ಮಾಡಿಯೂ ತಪ್ಪಿಸಿಕೊಳ್ಳಬಲ್ಲರು” ಎಂದಿದ್ದರು.
ಪ್ರಕರಣದ ಸಂಬಂಧ ಇಂದು ನಡೆದ ವಿಚಾರಣೆಗೆ ಹಾಜರಾಗುವುದಿಂದ ತಮಗೆ ವಿನಾಯಿತಿ ನೀಡಬೇಕೆಂದು ಕೋರಿ ಕಂಗನಾ ಸಲ್ಲಿಸಿದ್ದ ಮನವಿಗೆ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಆರ್ ಖಾನ್ ಸಮ್ಮತಿ ಸೂಚಿಸಿದರು.
ಈ ಹಿಂದಿನ ವಿಚಾರಣೆ ವೇಳೆ ಕಂಗನಾ ಹಾಜರಾತಿಗೆ ನ್ಯಾಯಾಲಯ ಕೊನೆಯ ಅವಕಾಶ ನೀಡಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದರೆ ಆಕೆಯ ವಿರುದ್ಧ ಜಾಮೀನು ನೀಡಬಹುದಾದ ವಾರೆಂಟ್ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿತ್ತು.
ಅಖ್ತರ್ ಅವರ ಪರವಾಗಿ ಹಾಜರಾದ ವಕೀಲರಾದ ಜಯ ಭಾರದ್ವಾಜ್ ಮತ್ತು ಪ್ರಿಯಾ ಅರೋರಾ ಅವರು ಕಂಗನಾ ಅರ್ಜಿಯನ್ನು ವಿರೋಧಿಸಿದಲ್ಲದೆ ಕಂಗನಾ ಇಲ್ಲಿಯವರೆಗೆ ಒಂದೇ ಒಂದು ದಿನವೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಲು ಕೋರಿದರು. ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ರನೌತ್ ಅವರ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ ಎಂದು ಜಯಾ ನ್ಯಾಯಾಲಯದ ಗಮನಸೆಳೆದರು.
ಕಂಗನಾ ಪರ ವಾದಿಸಿದ ವಕೀಲ ರಿಜ್ವಾನ್ ಸಿದ್ದಿಕಿ ಅವರು ನಟಿ ಎರಡು ವಾರಗಳಿಂದ ತಮ್ಮ ಚಲನಚಿತ್ರ ಪ್ರಚಾರ ಮಾಡುತ್ತಿದ್ದು ಅವರಿಗೆ ಕೋವಿಡ್ ರೋಗಲಕ್ಷಣಗಳಿವೆ ಎಂದರು. ಹೀಗಾಗಿ ಇಂದಿನ ವಿಚಾರಣೆಗೆ ವಿನಾಯಿತಿ ನೀಡಿದರೆ ಆಕೆಯ ಆರೋಗ್ಯ ತಪಾಸಣೆ ಸಾಧ್ಯವಾಗಲಿದೆ ಎಂದು ವಾದಿಸಿದರು. ಸೋಂಕು ತಗುಲಿರುವುದು ದೃಢಪಟ್ಟರೆ ವೈದ್ಯಕೀಯ ವರದಿಯೊಂದಿಗೆ ವಿನಾಯಿತಿಗಾಗಿ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ವಾದ ವಿರೋಧಿಸಿದ ಜಯ ಅವರು ಕಂಗನಾ ಅವರಿಗೆ ಯಾವುದೇ ಉನ್ನತ ನ್ಯಾಯಾಲಯದಿಂದ ರಕ್ಷಣೆಯಾಗಲಿ ಅಥವಾ ಪ್ರಸ್ತುತ ವಿಚಾರಣೆಗೆ ತಡೆಯಾಗಲಿ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಮತ್ತೊಂದೆಡೆ ದೂರುದಾರ ಅಖ್ತರ್ ಪ್ರತಿ ಬಾರಿಯೂ ಹಾಜರಾಗುತ್ತಿರುವುದನ್ನು ಪ್ರಸ್ತಾಪಿಸಿದರು. ವಾರೆಂಟ್ ಹೊರಡಿಸಲು ಕೋರಿದ ಅವರು ಇವೆಲ್ಲವೂ ನ್ಯಾಯಾಲಯ ಕಲಾಪವನ್ನು ವಿಳಂಬಗೊಳಿಸಲು ಕಂಗನಾ ಅನುಸರಿಸುತ್ತಿರುವ ತಂತ್ರಗಳು ಎಂದರು.
ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಬೇಕು ಎಂದು ಕೋರಿ ಕಂಗನಾ ಅವರು ಸಲ್ಲಿಸಿದ್ದ ಅರ್ಜಿ ಬಾಕಿ ಉಳಿದಿದ್ದು ಸೆಪ್ಟೆಂಬರ್ 20ರಂದು ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.
(ಕೃಪೆ: ಬಾರ್ & ಬೆಂಚ್)