ಪಾರ್ಲಿಮೆಂಟ್ ಬದಲು ಬೀದಿಗಿಳಿದ ಜನರು ಕಾಯ್ದೆ ರೂಪಿಸುತ್ತಿದ್ದಾರೆ: ಮತ್ತೆ ನಾಲಗೆ ಹರಿಯಬಿಟ್ಟ ಕಂಗನಾ

Prasthutha|

ಕೃಷಿ ಕಾಯ್ದೆ ರದ್ದತಿ ಬಗ್ಗೆ ವಿವಾದಾತ್ಮಕ ಹೇಳಿಕೆ

- Advertisement -

ನವದೆಹಲಿ: ದೇಶದಲ್ಲಿ ಪಾರ್ಲಿಮೆಂಟ್ ನಲ್ಲಿ ಕಾಯ್ದೆಗಳನ್ನು ರೂಪಿಸುವ ಬದಲು ಹೋರಾಟದ ನೆಪದಲ್ಲಿ ಬೀದಿಗಿಳಿದ ಜನರು ರೂಪಿಸುವಂತಾಗಿರುವುದು ದುರಂತ ಬೆಳವಣಿಗೆ ಎಂದು ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.

ಕೆಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದು ಶುಕ್ರವಾರ ಈ ಕಾಯ್ದೆಗಳನ್ನು ರದ್ದುಗೊಳಿಸಿದೆ ಎಂದು ಪ್ರಧಾನಿ ಘೋಷಿಸಿದ ಬೆನ್ನಲ್ಲೇ ನಟಿ ಕಂಗನಾ, ಈ ಹೇಳಿಕೆಯನ್ನು ಹರಿಯ ಬಿಡುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

- Advertisement -

ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತೆಯಾದ ಕಂಗನಾ ಟಿವಿ ಸಂದರ್ಶನವೊಂದರಲ್ಲಿ ಬಿಜೆಪಿಯನ್ನು ಓಲೈಸುವ ಭರದಲ್ಲಿ ಭಾರತಕ್ಕೆ 1947 ರಲ್ಲಿ ಲಭಿಸಿದ್ದು ಬರೀ ಬಿಕ್ಷೆ, ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಲಭಿಸಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಆ ಮೂಲಕ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದ್ದರು.

ತನ್ನ ಇನ್ ಸ್ಟಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಕಂಗನಾ, ದೇಶದ ಕಾಯ್ದೆಗಳನ್ನು ಬೀದಿಗಿಳಿದ ಜನರು ರೂಪಿಸುತ್ತಿದ್ದಾರೆ ಹೊರತು ಚುನಾಯಿತ ಪಾರ್ಲಿಮೆಂಟ್ ಸರ್ಕಾರವಲ್ಲ ಎಂದು ಕೃಷಿ ಕಾಯ್ದೆ ರದ್ದತಿಯನ್ನು ವಿರೋಧಿಸಿದ್ದಾರೆ.

ಮಾತ್ರವಲ್ಲ ಇನ್ನೊಂದು ಇನ್ ಸ್ಟಾ ಪೋಸ್ಟ್ ನಲ್ಲಿ ಮಾಜಿ ಇಂದಿರಾ ಗಾಂಧಿ ಚಿತ್ರವನ್ನು ಹಂಚಿಕೊಂಡು, ದೇಶದ ಆತ್ಮ ಸಾಕ್ಷಿಯ ನಾಗರಿಕರು ಗಾಢ ನಿದ್ರೆಯಲ್ಲಿರುವಾಗ ತುರ್ತು ಪರಿಸ್ಥಿತಿಯೊಂದೇ ಪರಿಹಾರವೆಂದು ಭಾವಿಸಿದಂತಿದೆ ಎಂದು ಇಂದಿರಾ ಗಾಂಧಿಯ ಅಂದಿನ ಆಡಳಿತ ವೈಖರಿಯನ್ನು ಉಲ್ಲೇಖಿಸಿ ಕುಟುಕಿದ್ದಾರೆ.



Join Whatsapp