ಮುಂಬೈ: ನಟಿ ಕಂಗನಾ ರಣಾವತ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ ಮುಂದುವರಿದಿದೆ.
ಕಂಗನಾ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಸ್ವಾತಂತ್ರ್ಯ ಹೋರಾಟದ ಕುರಿತು ಕಂಗನಾ ಅವರ ಹೇಳಿಕೆ ಸಂಪೂರ್ಣವಾಗಿ ತಪ್ಪು. ಸ್ವಾತಂತ್ರ್ಯ ಚಳವಳಿಯ ಬಗ್ಗೆ ನಕಾರಾತ್ಮಕವಾಗಿ ಟೀಕೆ ಮಾಡಲು ಯಾರಿಗೂ ಹಕ್ಕಿಲ್ಲ‘ ಎಂದು ಹೇಳಿದ್ದಾರೆ.
‘ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಕಾರ್ಯವನ್ನು ನಟಿ ಕಂಗನಾ ಶ್ಲಾಘಿಸಬಹುದು. ಆದರೆ, ಅವರಿಗೆ ಸ್ವಾತಂತ್ರ್ಯ ಹೋರಾಟವನ್ನು ಟೀಕಿಸುವ ಹಕ್ಕಿಲ್ಲ‘ ಎಂದೂ ಚಂದ್ರಕಾಂತ್ ಪಾಟೀಲ್ ಅವರು ನಟಿ ವಿರುದ್ಧ ಹರಿಹಾಯ್ದಿದ್ದಾರೆ.
ಇದಕ್ಕೂ ಮೊದಲು ದೆಹಲಿ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ಅವರು ಕಂಗನಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದ್ದಾರೆ.
ಅಲ್ಲದೆ ಬಿಜೆಪಿ ನಾಯಕ ವರುಣ್ ಗಾಂಧಿ ಸಹ ಕಂಗನಾ ವಿರುದ್ಧ ‘ಇದು ದೇಶ ವಿರೋಧಿ ಕೃತ್ಯ ಮತ್ತು ಕಂಗನಾ ಅವರನ್ನು ದೇಶವಿರೋಧಿ’ ಎನ್ನಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೂಡ ಕಂಗನಾ ಹೇಳಿಕೆಯನ್ನು ಖಂಡಿಸಿದ್ದು, ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಂಗನಾ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.