ಕಮಲ್ ನಾಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ?

Prasthutha|

ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ಕಮಲನಾಥ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ.

- Advertisement -

ಇದಕ್ಕೆ ಪುಷ್ಟಿನೀಡುವಂತೆ, ಕಮಲನಾಥ್ ಅವರು ಗುರುವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಪಕ್ಷದೊಳಗಿನ ಬದಲಾವಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ.

2017ರಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಆನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಲಾಗಿತ್ತು. ಅಧ್ಯಕ್ಷ ಚುನಾವಣೆ ನಡೆಸುವ ಕುರಿತು ಕಾಂಗ್ರೆಸ್ ಪದೇ ಪದೇ ಹೇಳುತ್ತಿದೆಯಾದರೂ ಆ ಪ್ರಕ್ರಿಯೆ ಕೋವಿಡ್, ಮತ್ತಿತರ ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಿದೆ. ಈಗ ದೊರೆತಿರುವ ಮಾಹಿತಿ ಪ್ರಕಾರ, ಸಂಸತ್ತಿನ ಮುಂಗಾರು ಅಧಿವೇಶನದ ಬಳಿಕ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.

- Advertisement -

ಕಮಲನಾಥ್ ಅವರು ನೆಹರು- ಗಾಂಧಿ ಪರಿವಾರದ ನಿಕಟವರ್ತಿಯಾಗಿದ್ದಾರೆ. 1980ರಿಂದ 9 ಬಾರಿ ಲೋಕಸಭಾ ಸದಸ್ಯರಾಗಿರುವ ಅವರು, ಹಲವು ಬಾರಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.

Join Whatsapp