ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ: ಕಾರ್ಗಿಲ್ ಮೂಲದ ನಾಲ್ವರು ವಿದ್ಯಾರ್ಥಿಗಳಿಗೆ ಜಾಮೀನು

Prasthutha|

ನವದೆಹಲಿ, ಜು.16: ರಾಜಧಾನಿ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಜನವರಿ 29 ರಂದು ನಡೆದ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕದಿಂದ ಬಂಧಿಸಲ್ಪಟ್ಟ ನಾಲ್ವರು ಕಾರ್ಗಿಲ್ ಮೂಲದ ವಿದ್ಯಾರ್ಥಿಗಳಿಗೆ ಗುರುವಾರ ನ್ಯಾಯಾಲಯ ಜಾಮೀನು ನೀಡಿದೆ.
ಈ ವಿದ್ಯಾರ್ಥಿಗಳ ವಿರುದ್ಧ ಆರೋಪ ಕಂಡುಬರುತ್ತಿಲ್ಲ ಮತ್ತು ಅವರು ಕಳಂಕರಹಿತ ಪೂರ್ವ ಹಿನ್ನೆಲೆ ಹೊಂದಿದವರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

- Advertisement -

ನಝೀರ್ ಹುಸೇನ್, ಜುಲ್ಫಿಕರ್ ಅಲಿ, ಅಜಾಝ್ ಹುಸೇನ್ ಮತ್ತು ಮುಝಮ್ಮಿಲ್ ಹುಸೇನ್ ಅವರಿಗೆ ಜಾಮೀನು ನೀಡಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಡಾ. ಪಂಕಜ್ ಶರ್ಮಾ ಅವರು, ಈ ವಿದ್ಯಾರ್ಥಿಗಳು ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಅಥವಾ ಸಮಾಜಕ್ಕೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ಪುರಾವೆಯನ್ನು ತನಿಖಾ ಅಧಿಕಾರಿ (ಐಒ) ನೀಡಿಲ್ಲ ಎಂದು ಹೇಳಿದರು. ಈ ಎಲ್ಲಾ ವಿದ್ಯಾರ್ಥಿಗಳು 20 ವರ್ಷ ವಯಸ್ಸಿನವರಾಗಿದ್ದಾರೆ.


ವಿದ್ಯಾರ್ಥಿಗಳ ವಯಸ್ಸು, ಪೂರ್ವ ಹಿನ್ನೆಲೆ ಮತ್ತು ಎಲ್ಲಾ ಆರೋಪಿಗಳು ಸಮಾಜದಲ್ಲಿ ಉತ್ತಮ ನಡವಳಿಕೆ ಹೊಂದಿದ್ದಾರೆ ಮತ್ತು ನಿವಾಸಕ್ಕೆ ಸ್ಥಿರ ಸ್ಥಳವನ್ನು ಹೊಂದಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಶರ್ಮಾ ಆದೇಶದಲ್ಲಿ ತಿಳಿಸಿದ್ದಾರೆ.
ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ, ವಿಶೇಷ ಘಟಕ ನಡೆಸುತ್ತಿದ್ದು, ಇವರ ವಿರುದ್ಧ “ಕ್ರಿಮಿನಲ್ ಪಿತೂರಿ” ಪ್ರಕರಣವನ್ನು ದಾಖಲಿಸಿತ್ತು.
ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಸ್ಫೋಟಕ ವಸ್ತುಗಳನ್ನು ಇರುತ್ತಿದ್ದಾಗ ಸಿಸಿಟಿವಿ ಕ್ಯಾಮೆರಾದಿಂದ ಸೆರೆಹಿಡಿಯಲಾದ ಇಬ್ಬರು ವ್ಯಕ್ತಿಗಳನ್ನು ಗುರುತಿಸಲು ಎನ್‌ಐಎ ತಲಾ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ ಕೆಲವೇ ದಿನಗಳ ನಂತರ ಜೂನ್ 23 ರಂದು ಎನ್ ಐಎ ವಿಶೇಷ ಘಟಕದ ಅಧಿಕಾರಿಗಳು ಈ ನಾಲ್ವರನ್ನು ಬಂಧಿಸಿದ್ದರು.

Join Whatsapp