“ಪಾಕಿಸ್ತಾನ ಪ್ರಧಾನಿ ಜೊತೆ ಭಟ್ ಕುಶಲೋಪರಿ!” | ಕಲ್ಲಡ್ಕ ಪ್ರಭಾಕರ್ ಭಟ್, ಯುಟಿ ಖಾದರ್ ಜೊತೆಗಿರುವ ಫೋಟೊ ವೈರಲ್

Prasthutha|

ಮಂಗಳೂರು : ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ಈಗ ಎಲ್ಲೆಡೆ ತಮಾಷೆಯ ವಸ್ತುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಯನ್ನು ಕಾಮಿಡಿಯಾಗಿ ತೆಗೆದುಕೊಂಡಿರುವ ಜನರು, ನಿನ್ನೆ ಸಂಜೆಯಿಂದ ಹಲವು ವ್ಯಂಗ್ಯ ಮಿಶ್ರಿತ ಟ್ರೋಲ್ ಆರಂಭಿಸಿದ್ದಾರೆ.

ಬಹುತೇಕ ಎಲ್ಲಾ ಟ್ರೋಲ್ ಸಂದೇಶಗಳು ಜನರನ್ನು ನಕ್ಕುನಕ್ಕು ಹೊಟ್ಟೆ ಹುಣ್ಣಾಗಿಸುವ ಮಾದರಿಯಲ್ಲಿವೆ. ಪ್ರಭಾಕರ ಭಟ್ ಮತ್ತು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಜೊತೆಗೆ ಕುಳಿತಿರುವ ಫೋಟೊ ಒಂದನ್ನು ಪೋಸ್ಟ್ ಮಾಡಿರುವ ಕೆಲವರು, ‘ಪಾಕಿಸ್ತಾನದ ಪ್ರಧಾನಿಯೊಂದಿಗೆ ಭಟ್ ಕುಶಲೋಪರಿ – ಪಾಕಿಸ್ತಾನದಲ್ಲಿ ವೀರರಾಣಿ ಅಬ್ಬಕ್ಕ ಪ್ರತಿಮೆ ಇರುವುದು ಸಂತೋಷದ ಸಂಗತಿ’ ಎಂಬ ವ್ಯಂಗ್ಯ ಸಂದೇಶವನ್ನು ಹರಿಬಿಡಲಾಗಿದೆ.

- Advertisement -

‘ತೊಕ್ಕೊಟ್ಟು ಸಂಕದಿಂದ ಉಳ್ಳಾಲಕ್ಕೆ ವಿಮಾನ ಹಾರಾಟಕ್ಕೆ ಚಿಂತನೆ – ಉಳ್ಳಾಲದ ಪ್ರಧಾನಿ ಯು.ಟಿ. ಖಾದರ್’ ಎಂಬ ಸಂದೇಶವನ್ನು ಯಾರೋ ಅನಾಮಿಕರು ಬಿಡುಗಡೆ ಮಾಡಿದ್ದಾರೆ.

‘ಉಳ್ಳಾಲದ ಕರೆನ್ಸಿ ಯಾವುದು?’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಉಳ್ಳಾಲಕ್ಕೆ ತೆರಳುವ 44 ನಂಬರ್ ನ ಸಿಟಿ ಬಸ್ ಒಂದರ ಫೋಟೊ ಎಡಿಟ್ ಮಾಡಿ ‘ಸ್ಟೇಟ್ ಬ್ಯಾಂಕ್ ಟು ಪಾಕಿಸ್ತಾನ್’ ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ.

‘1st Flight passed near Netravati Bridge’ ಎಂಬ ಸಂದೇಶದೊಂದಿಗೆ ವಿಮಾನವೊಂದರ ಮೇಲೆ ‘ಉಳ್ಳಾಲ ಎಕ್ಸ್ ಪ್ರೆಸ್’ ಎಂದು ಎಡಿಟ್ ಮಾಡಿ ಹರಿಬಿಡಲಾಗಿದೆ. ‘ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಮರುದಿನವೇ ಪ್ರಥಮ ವಿಮಾನ ಹಾರಾಟ’ ಎಂಬ ಸಂದೇಶವನ್ನು ಕೂಡ ಇದೇ ಎಡಿಟ್ ಮಾಡಲಾದ ಫೋಟೊದೊಂದಿಗೆ ಪೋಸ್ಟ್ ಮಾಡಲಾಗಿದೆ.

‘ಪ್ರಯಾಣಿಕರ ಗಮನಕ್ಕೆ ಭಾರತದಿಂದ ಉಳ್ಳಾಲಕ್ಕೆ ಹೊರಡಬೇಕಿದ್ದ ಉಳ್ಳಾಲ ಎಕ್ಸ್ ಪ್ರೆಸ್ ವಿಮಾನವು ತಾಂತ್ರಿಕದೋಷದಿಂದ ರದ್ದಾಗಿದೆ, ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ’ ಎಂದು ವಿಮಾನ ನಿಲ್ದಾಣವೊಂದರ ಫೋಟೊ ಎಡಿಟ್ ಮಾಡಿ ರವಾನಿಸಲಾಗಿದೆ.

ಗಡಿ ಕಾಯುವ ಯೋಧರ ಫೋಟೊವೊಂದನ್ನು ಎಡಿಟ್ ಮಾಡಿ, ಅದರಲ್ಲಿ ‘ಉಳ್ಳಾಲ’ ಎಂದು ಬರೆದಿರುವ ಮೈಲಿಗಲ್ಲಿನ ಚಿತ್ರ ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ.

‘ಇನ್ನು ಮುಂದೆ ಉಳ್ಳಾಲಕ್ಕೆ ಹೋಗುವಾಗ ಪಾಸ್ ಪೋರ್ಟ್ ಕಡ್ಡಾಯ’ ಎಂದು ಪಾಸ್ ಪೋರ್ಟ್ ಫೋಟೊ ಎಡಿಟ್ ಮಾಡಿ ಹಾಕಲಾಗಿದೆ.

ಈ ಸಂದೇಶಗಳೊಂದಿಗೆ #ಕಲ್ಲಡ್ಕ_ಕಾಮಿಡಿ ಎಂಬ ಹ್ಯಾಶ್ ಟ್ಯಾಗ್ ವ್ಯಾಪಕವಾಗಿ ಬಳಕೆಯಾಗಿದೆ.

- Advertisement -