ಬಂಟ್ವಾಳ: ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸುವ ಮಾಹಿತಿ ನೀಡಿದ್ದರು. ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಹೆಚ್ ಡಿಕೆ ಅವರು ಪ್ರಭಾಕರ ಭಟ್ ಅವರನ್ನು ಹಾಡಿ ಹೊಗಳಿದ್ದಾರೆ.
ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಹೇಳಿದರು.