ರೈತರೊಂದಿಗಿನ ಅಧಿಕಾರಿಗಳ ಆಟ ಅಕ್ಷಮ್ಯ: ಕಾಗೋಡು ತಿಮ್ಮಪ್ಪ

Prasthutha|

ಕಾರ್ಗಲ್:  ‘ರೈತರೊಂದಿಗೆ ಅಧಿಕಾರಿಗಳು ಚೆಲ್ಲಾಟ ನಡೆಸುವುದನ್ನು ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಸಿದ್ದಾರೆ.

- Advertisement -

ಜನಪರ ಹೋರಾಟ ವೇದಿಕೆ ಮತ್ತು ಕಾಗೋಡು ಜನಪರ ವೇದಿಕೆ ವತಿಯಿಂದ ಶರಾವತಿ ವನ್ಯಜೀವಿ ಅಭಯಾರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯವನ್ನು ಖಂಡಿಸಿ ಬಿಳಿಗಾರು ಗ್ರಾಮದಿಂದ ಕಾರ್ಗಲ್‌ವರೆಗೆ ಹಮ್ಮಿಕೊಂಡಿದ್ದ  ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು,  ‘ಉರುಳುಗಲ್ಲು ಪ್ರಕರಣದಲ್ಲಿ ರೈತರ ವಿರುದ್ಧ ಕಾರಣವಿಲ್ಲದೇ  ಪ್ರಕರಣ ದಾಖಲಿಸಿ, ಅಮಾನವೀಯ ಕ್ರೌರ್ಯ ಮೆರೆದಿರುವ ವಿಚಾರ ಕಂಡು ಬಂದಿದೆ. ಜಿಲ್ಲಾಧಿಕಾರಿ ಇದಕ್ಕೊಂದು ತಾರ್ಕಿಕವಾದ ಅಂತ್ಯ ಕಾಣಿಸಿ ಆದಿವಾಸಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು   ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದರು.

- Advertisement -

ಸಿಗಂದೂರು ಧಾರ್ಮಿಕ ತಾಣದ ಧರ್ಮದರ್ಶಿ ಡಾ. ರಾಮಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಡಿಸಿಸಿ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಸಾಮಾಜಿಕ ಹೋರಾಟಗಾರ ಜಿ.ಟಿ. ಸತ್ಯನಾರಾಯಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿ, ಅಶೋಕ ಬರದವಳ್ಳಿ,ವಕೀಲರ ಸಂಘದ ತ್ಯಾಗಮೂರ್ತಿ, ರೈತ ಸಂಘದ ದಿನೇಶ ಶಿರವಾಳ, ಅರುಣ, ಆದಿವಾಸಿ ಬುಡಕಟ್ಟು ಹೋರಾಟ ಸಂಚಾಲಕ ರಾಮಣ್ಣ ಹಸಲರು, ಆಮ್ ಆದ್ಮಿ ಸಾಗರ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Join Whatsapp