ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಜಾವಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಈಚೆಗೆ ಬಣಕಲ್ ಸಮೀಪದ ಕಾಡುಗದ್ದೆಯ ಎಸ್ಟೇಟ್ ಬಳಿ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಓಡಾಟದ ಬಗ್ಗೆ ಸುದ್ದಿಯಾಗಿತ್ತು.ಇದರ ಬೆನ್ನಲ್ಲೇ ಈಗ ಹೊರನಾಡಿಗೆ ಹೋಗುವ ರಸ್ತೆಯಲ್ಲಿ ಜಾವಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ರಸ್ತೆಗೆ ಕಾಡು ಕೋಣಗಳು ಅಡ್ಡ ಬಂದಿದ್ದು ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಹೊರನಾಡು ಕಡೆಗೆ ಹೆಚ್ಚು ಪ್ರವಾಸಿಗರು ಬರುವುದರಿಂದ ರಸ್ತೆಯಲ್ಲಿ ಓಡಾಡುತ್ತಿರುವ ಕಾಡುಕೋಣಗಳ ಹಿಂಡನ್ನು ಕಾಡಿಗೆ ಅಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಕಾಡುಕೋಣಗಳು ಹೇಮಾವತಿ, ಜಾವಳಿ,ಹಟ್ಟಿಹರ,ಮಲೆಮನೆ, ದುರ್ಗದಹಳ್ಳಿ, ಬಲಿಗೆ,ಮೇಗೂರು,ಕೆಳಗೂರು ಭಾಗದಲ್ಲಿ ಹೆಚ್ಚಾಗಿ ಓಡಾಟವಿದೆ.ಇತ್ತೀಚೆಗೆ ಆಹಾರ ಅರಸಿ ರಸ್ತೆ ಕಡೆಗೂ ಬರುತ್ತಿವೆ.ಈವರೆಗೆ ಯಾವುದೇ ಜನರ ಮೇಲೆ ದಾಳಿ ಮಾಡಿರುವುದು ಕಡಿಮೆ. ಈಚೆಗೆ ಕಾಡುಕೋಣ ರಸ್ತೆಯಲ್ಲಿ ಆಟೋ ಪಲ್ಟಿ ಮಾಡಲು ಯತ್ನಿಸಿದ ಘಟನೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾಡುಕೋಣಗಳು ರಸ್ತೆಗೆ ಅಡ್ಡ ಬಂದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ಭಾಗಗಳಲ್ಲಿ ತೋಟಗಳಿಗೆ ಕೂಲಿ ಕಾರ್ಮಿಕರು ಹೆಚ್ಚಾಗಿ ತೆರಳುವುದರಿಂದ ಭಯದ ಭೀತಿಯಿದೆ.ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥ ಪರೀಕ್ಷಿತ್ ಜಾವಳಿ ತಿಳಿಸಿದ್ದಾರೆ.
‘ ಜಾವಳಿಯ ಸುತ್ತಮುತ್ತ ಕಾಡುಕೋಣಗಳು ರಸ್ತೆಗಳಲ್ಲಿ ಓಡಾಟ ನಡೆಸುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ.ರಸ್ತೆಗೆ ಬರುವ ಕಾಡುಕೋಣಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗೆ ಓಡಿಸಲು ಪ್ರಯತ್ನಿಸಲಾಗುವುದು.ಈ ಬಗ್ಗೆ ಹಿರಿಯ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಚಂದನ್ ಗೌಡ ತಿಳಿಸಿದ್ದಾರೆ.