ಬೆಂಗಳೂರು: 2002ರ ಗುಜರಾತ್ ಕೋಮು ಸಂಘರ್ಷದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಡೆಯ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆಸಿದ ಜಸ್ಟಿಸ್ ಫಾರ್ ಬಿಲ್ಕಿಸ್ ಬಾನು (#JusticeForBilkisBano) ಅಭಿಯಾನ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಕರ್ನಾಟಕದಲ್ಲಿ ನಂ.1 ಆಗಿದೆ. ಭಾರತದಲ್ಲಿ ನಂಬರ್ 2 ಆಗಿದೆ.
ಅಪರಾಧ ಸಾಬೀತಾಗಿ ಶಿಕ್ಷೆಗೆ ಗುರಿಯಾದ ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆಯು ದೇಶದ ನ್ಯಾಯ ವ್ಯವಸ್ಥೆಯನ್ನು ಅಣಕ ಮಾಡಿದೆ, ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಮತ್ತು ಅತ್ಯಂತ ನಾಚಿಕೆಗೇಡು ವಿಷಯ ಹಾಗೂ ಅಪಾಯಕಾರಿ ಸನ್ನಿವೇಶ ಕೂಡ ಆಗಿದೆ ಎಂದು ಸರಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಸುದ್ದಿಯನ್ನು ಓದಿದ ನಂತರ ಒಬ್ಬ ಮಹಿಳೆಯಾಗಿ ಮತ್ತು ಒಬ್ಬ ನಾಗರಿಕ ಸೇವಕನಾಗಿ ನಾನು ಅಪನಂಬಿಕೆಯಿಂದ ಕುಳಿತಿದ್ದೇನೆ. ಭಯವಿಲ್ಲದೆ ಮುಕ್ತವಾಗಿ ಉಸಿರಾಡುವ ಅವಳ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ, ಮತ್ತೆ ನಮ್ಮನ್ನು ನಾವು ಸ್ವತಂತ್ರ ರಾಷ್ಟ್ರವೆಂದು ಕರೆದುಕೊಳ್ಳುತ್ತೇವೆ ಎಂದು ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಅವರು ಟ್ವೀಟ್ ಮಾಡಿದ್ದಾರೆ.
ಅಪರಾಧಿಗಳನ್ನು ಮತ್ತೆ ಜೈಲಿಗೆ ಹಾಕಬೇಕು, ಯಾವುದೇ ಕಾರಣಕ್ಕೂ ಇಂತಹವರನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.