‘ಅಳಿಯನಿಂದ ಹತ್ಯೆಯಾದ ಮಗಳಿಗೆ ನ್ಯಾಯ ಕೊಡಿಸಿ’: ಪಂಚರತ್ನ ಯಾತ್ರೆಯಲ್ಲಿ HDK ಪಾದ ಹಿಡಿದು ಗೋಳಾಡಿದ ಮಹಿಳೆ

Prasthutha|

ಬಿಜಾಪುರ: ‘ಅಳಿಯನಿಂದ ಹತ್ಯೆಯಾದ ಮಗಳಿಗೆ ನ್ಯಾಯ ಕೊಡಿಸಿ’ ಎಂದು ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪಾದ ಹಿಡಿದು ಮಹಿಳೆಯೊಬ್ಬರು ಗೋಳಾಡಿದ ಘಟನೆ ಬಿಜಾಪುರ ಜಿಲ್ಲೆಯ ಟಕ್ಕಳಕಿಯ ಪಂಚರತ್ನ ಸಮಾವೇಶ ಸ್ಥಳದಲ್ಲಿ ನಡೆದಿದೆ.

- Advertisement -

ಏಳು ತಿಂಗಳು ಗರ್ಭಿಣಿಯಾಗಿದ್ದ ನನ್ನ ಮಗಳು ಮಾಯಕ್ಕನನ್ನು ಕ್ರೂರ ಅಳಿಯ ಬಾವಿಗೆ ಹಾಕಿ ಕೊಂದಿದ್ದಾನೆ. ಅವನಿಗೆ ಕಠಿಣ ಶಿಕ್ಷೆ ಆಗಲೇಬೇಕು. ನನಗೆ ಅದಕ್ಕಿಂತ ಬೇರೆ ಸಹಾಯ ಬೇಡ ಎಂದು ಮಹಿಳೆ ಮಾಜಿ ಮುಖ್ಯಮಂತ್ರಿಗಳ ಎದುರು ಕಣ್ಣೀರು ಹಾಕಿದ್ದಾಳೆ.  

ವಿಜಯಪುರ ಮಾಲ್ ಎಂಬ ಗ್ರಾಮದ ಲಕ್ಷ್ಮಿ ಬಾಯಿ ಕನ್ನೂರ ಎಂಬ ಮಹಿಳೆ ಕುಮಾರಸ್ವಾಮಿ ಅವರನ್ನು ಬಸವನ ಬಾಗೇವಾಡಿಗೆ ಹುಡುಕಿಕೊಂಡು ಬಂದಿದ್ದು, ಅಲ್ಲಿ ಅವರು ಸಿಗದಿದ್ದಕ್ಕೆ ಬಸ್ ಹಿಡಿದು ಟಕ್ಕಳಕಿಯ ಸಮಾವೇಶದ ಸ್ಥಳಕ್ಕೆ ಬಂದಿದ್ದಾರೆ.

- Advertisement -

ಮಗಳನ್ನು ಇಂಡಿ ತಾಲೂಕಿನ ಹಿರೇರೂರು ಗ್ರಾಮಕ್ಕೆ ಮಾಡುವೆ ಮಾಡಿ ಕೊಟ್ಟಿದ್ದೆ. ಗರ್ಭಿಣಿ ಮಗಳನ್ನು ಐದು ಲಕ್ಷ ವರದಕ್ಷಿಣೆಗೆ ಅಳಿಯ  ಕಿರುಕುಳ ನೀಡುತ್ತಿದ್ದ. ಊರಿನ ಹಿರಿಯರು ರಾಜಿ ಮಾಡಲು ಯತ್ನಿಸಿದ್ದು, ಆಗ ಊರಿನ ಹಿರಿಯರ ಮೂಲಕ ಅಳಿಯನಿಗೆ 30000 ವರದಕ್ಷಿಣೆ ಕೊಟ್ಟಿದ್ದೆ ಎಂದು ಮಹಿಳೆ ಗೋಗರೆದಿದ್ದಾರೆ.

ಇನ್ನು ಇಂಡಿ ಗ್ರಾಮಾಂತರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಗದರಿಸಿ ಕಳುಹಿಸಿದ್ದಾರೆ ಎಂದು ಮಹಿಳೆ ಕುಮಾರಸ್ವಾಮಿಗೆ ದೂರು ನೀಡಿದ್ದಾರೆ.

 ಮಹಿಳೆಯ ಕಣ್ಣೀರಿಗೆ ಮಿಡಿದ ಮಾಜಿ ಸಿಎಂ

ಸಮಾವೇಶದ ಸ್ಥಳದಿಂದಲೇ ರಾಜ್ಯ ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಕರೆ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿಗಳು, “ನಾಳೆ ಬಬಲೇಶ್ವರ ಕ್ಷೇತ್ರದ ನಿರೋಣಿ ಗ್ರಾಮಕ್ಕೆ ಬನ್ನಿ. ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ” ಎಂದು ಮಹಿಳೆಗೆ ಭರವಸೆ ನೀಡಿದ್ದಾರೆ.  

ಇದು ರಾಜ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿ

ಇದು ರಾಜ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರ ಪರಿಸ್ಥಿತಿ ದಯನೀಯ ವಾಗಿದೆ. ಶಿಲಾಯುಗದ ಪರಿಸ್ಥಿತಿ ಈ ಭಾಗದಲ್ಲಿದೆ. ಜನರ ಮುಗ್ದ ಸ್ಥಿತಿಯನ್ನು ರಾಜಕೀಯ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ನಿಂತು ಬುರಡೆ ಭಾಷಣ ಮಾಡಿದರೆ ಏನು ಪ್ರಯೋಜನ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp