ಹೊಸದಿಲ್ಲಿ: ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಲ್ಲಿ ಭಾರತ ಮತದಾನದಿಂದ ದೂರ ಉಳಿದಿದ್ದರೂ, ವಿಶ್ವಸಂಸ್ಥೆಯ ನ್ಯಾಯಾಲಯದಲ್ಲಿ ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ರಷ್ಯಾ ವಿರುದ್ಧ ಮತ ಚಲಾಯಿಸಿದರು.
ಫೆಬ್ರವರಿ 24ರಂದು ಪ್ರಾರಂಭಿಸಿದ ಉಕ್ರೇನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣ ಸ್ಥಗಿತಗೊಳಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ ಸೂಚಿಸಿದ್ದು,ಈ ಸಂಬಂಧ ಅಂತರಾಷ್ಟ್ರೀಯ ನ್ಯಾಯಾಲಯ 13-2 ಮತಗಳ ಅಂತರದಿಂದ ನಿರ್ಣಯ ಕೈಗೊಂಡಿದೆ. ನಿರ್ಧಾರದ ಪರವಾಗಿ 13 ಮತಗಳು ಬಿದ್ದರೆ ವಿರುದ್ಧವಾಗಿ ಎರಡು ಮತಗಳು ಚಲಾವಣೆಯಾಗಿವೆ. ಪ್ರಕರಣದ ಬಗ್ಗೆ ಅಂತಿಮ ನಿರ್ಧಾರವನ್ನು ಬಾಕಿ ಇರಿಸಲಾಗಿದೆ.
15 ನ್ಯಾಯಮೂರ್ತಿಗಳಿರುವ ಐಸಿಜೆ ಅಧ್ಯಕ್ಷರಾಗಿರುವ ಅಮೆರಿಕದ ಜೋನ್ ಇ ಡೊನೊಗ್ ಸೇರಿದಂತೆ ಸ್ಲೋವಾಕಿಯಾ, ಫ್ರಾನ್ಸ್, ಮೊರಾಕ್ಕೊ, ಸೋಮಾಲಿಯಾ, ಉಗಾಂಡ, ಭಾರತ, ಜಮೈಕಾ, ಲೆಬನಾನ್, ಜಪಾನ್, ಜರ್ಮನಿ, ಆಸ್ಟ್ರೇಲಿಯಾ ನ್ಯಾಯಮೂರ್ತಿಗಳು ಹಾಗೂ ಹಂಗಾಮಿ ನ್ಯಾಯಮೂರ್ತಿಯೊಬ್ಬರು ಸೂಚನೆಯ ಪರವಾಗಿ ಮತ ಚಲಾಯಿಸಿದರು.
ಐಸಿಜೆ ಉಪಾಧ್ಯಕ್ಷ ರಷ್ಯಾದ ಕಿರಿಲ್ ಜಾರ್ಜಿಯನ್ ಮತ್ತು ನ್ಯಾಯಮೂರ್ತಿ ಸ್ಯೂ ಹಂಕಿನ್ (ಚೀನಾ) ಈ ಸೂಚನೆಯ ವಿರುದ್ಧ ಮತ ಚಲಾಯಿಸಿದ್ದಾರೆ.