ನವದೆಹಲಿ: ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಅವರು ಮುಂದಿನ 2022 – 2024 ರ ಅವಧಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನಾಯಮೂರ್ತಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನವೆಂಬರ್ 11, 1959 ರಂದು ರಂದು ಜನಿಸಿದ ಡಿ.ವೈ. ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ ಕಾನೂನು ವಿಭಾಗದಲ್ಲಿ ಅಭ್ಯಾಸ ಮಾಡಿದರು. ಜೂನ್ 1998 ರಲ್ಲಿ ಬಾಂಬೆ ಹೈಕೋರ್ಟ್ ನ ಹಿರಿಯ ವಕೀಲರಾಗಿ ಆಯ್ಕೆಯಾದ ಚಂದ್ರಚೂಡ್, ಅದೇ ವರ್ಷ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.
ಮಹಿಳಾ ಕಾರ್ಮಿಕರ ಹಕ್ಕು, ಎಚ್.ಐ.ವಿ ಪಾಸಿಟಿವ್ ಕಾರ್ಮಿಕರ ಹಕ್ಕು, ಗುತ್ತಿಗೆ ಕಾರ್ಮಿಕರ ಹಕ್ಕು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕು ಸೇರಿದಂತೆ ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮಾರ್ಚ್ 29, 2000 ರಲ್ಲಿ ಬಾಂಬೆ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಚಂದ್ರಚೂಡ್ ಅವರನ್ನು ನೇಮಿಸಲಾಯಿತು. ಅಕ್ಟೋಬರ್ 31, 2013 ರಿಂದ ಮೇ 13, 2016 ರ ವರೆಗೆ ಅಲಹಾಬಾದ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.
ಸದ್ಯ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆಯನ್ನು ನೀಡುತ್ತಿರುವ ಅವರು, ನವೆಂಬರ್ 2022 ರಿಂದ ನವೆಂಬರ್ 2024 ರ ವರೆಗೆ 2 ವರ್ಷಗಳ ಅವಧಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಬಲ ಮತ್ತು ಮಹತ್ವದ 220 ಕ್ಕೂ ಮಿಕ್ಕಿದ ತೀರ್ಪುಗಳನ್ನು ನೀಡಿದ್ದಾರೆ.