ಇಸ್ಲಾಮೊಫೋಬಿಯಾ ಪದ ಬಳಸಿದಂತೆಯೇ ‘ಹಿಂದುಫೋಬಿಯಾ’ವನ್ನೂ ಬಳಸಿ ಎಂದ ಟಿ.ಎಸ್.ತಿರುಮೂರ್ತಿ

Prasthutha|

ನವದೆಹಲಿ: ಇಸ್ಲಾಮೊಫೋಬಿಯಾ ಎಂಬ ಪದ ಬಳಸಿದಂತೆಯೇ ‘ಹಿಂದುಫೋಬಿಯಾ’ ಎಂಬ ಪದವನ್ನೂ ಬಳಸಬೇಕು. ಏಕೆಂದರೆ ಹಿಂದು, ಸಿಖ್, ಬೌದ್ಧ ಸಮುದಾಯಗಳು ಕೂಡ ಧಾರ್ಮಿಕವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ವಿಶ್ವಸಂಸ್ಥೆ ತನ್ನ ದಾಖಲೆಯಲ್ಲಿ ಹಿಂದೂಫೋಬಿಯಾ ಪದವನ್ನು ಬಳಸಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ. ಎಸ್. ತಿರುಮೂರ್ತಿ ಪ್ರತಿಪಾದಿಸಿದ್ದಾರೆ.
ದೆಹಲಿಯ ಗ್ಲೋಬಲ್ ಕೌಂಟರ್ ಟೆರರಿಸಮ್ ಎಂಬ ಸಂಸ್ಥೆಯ ಕಾರ್ಯಕ್ರಮದಲ್ಲಿ ವಿಡಿಯೊ ಮುಖಾಂತರ ಮುಖ್ಯಭಾಷಣ ಮಾಡಿದ ಅವರು, ಭಯೋತ್ಪಾದನೆ ನಿಗ್ರಹದ ಕುರಿತಾದ ಹೊಸ ಕಾರ್ಯತಂತ್ರ ದಾಖಲೆಯಲ್ಲಿ ‘ಬಲಪಂಥೀಯ ತೀವ್ರವಾದ’, ‘ಹಿಂಸಾತ್ಮಕ ರಾಷ್ಟ್ರೀಯವಾದ’ ಎಂಬೆಲ್ಲ ಪದಗಳನ್ನು ಬಹಳಷ್ಟು ಬಾರಿ ಬಳಸಲಾಗಿದೆ. ಉಗ್ರವಾದದ ವಿರುದ್ಧ ಹೋರಾಟದಲ್ಲಿ ಕೆಲವೊಮ್ಮೆ ‘ಇಸ್ಲಾಮಾಫೊಬಿಯೊ’ ಕೆಲಸ ಮಾಡುತ್ತದೆ, ಅಂದರೆ ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಿಸಲಾಗುತ್ತದೆ ಎಂಬರ್ಥದ ಅಭಿಪ್ರಾಯಗಳನ್ನು ನೀಡಲಾಗಿದೆ. ಇದು ಚರ್ಚೆಯನ್ನು ರಾಜಕೀಯಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
“ಧಾರ್ಮಿಕ ಪೋಬಿಯಾ ಬಗ್ಗೆ ಮಾತನಾಡುವಾಗ ಅಬ್ರಾಹಾಮಿಕ್ ಧರ್ಮಗಳು, ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂದಾಯಿಸಂ ಮೇಲೆ ನಡೆಯುವ ಹಿಂಸಾತ್ಮಕ ದಾಳಿಯನ್ನು ವಿರೋಧಿಸಲು ಯೋಜನೆಗಳನ್ನು ಯುಎನ್ ಇಲ್ಲವೇ ಹಲವು ದೇಶಗಳು ಹೊಂದಿವೆ. ಆದರೆ ಬೌದ್ಧರ ವಿರುದ್ಧ, ಸಿಖ್ ಧರ್ಮೀಯರ ವಿರುದ್ಧ ನಡೆಯುವ ಧಾರ್ಮಿಕ ಹಿಂಸಾಚಾರವನ್ನು ಕೌಂಟರ್ ಮಾಡುವ ಯೋಜನೆ ಸದ್ಯ ಇಲ್ಲ. ಅದನ್ನು ಕೈಗೆತ್ತಿಕೊಳ್ಳುವುದು ಈಗ ಅತ್ಯಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಭಾರತದ ನಿಲುವು ಮತ್ತು ಮಾಧ್ಯಮಗಳ ಪ್ರಚಾರವು ಬಲಪಂಥೀಯ ನೀತಿಯನ್ನು ಪ್ರತಿಪಾದಿಸುತ್ತಿವೆ ಎಂಬ ಪಾಶ್ಚಾತ್ಯ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸರಿಯಾದುದಲ್ಲ, ಅದು ಲೇಬಲ್ ಹಚ್ಚುವ ಕೆಲಸವಷ್ಟೆ ಎಂದು ತಿರುಮೂರ್ತಿ ತಿಳಿಸಿದರು.
“ನಾವು ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ ಪ್ರಜಾಪ್ರಭುತ್ವದಲ್ಲಿ ಬಲ ಪಂಥ ಎಡ ಪಂಥ ಎಲ್ಲವೂ ಇರುತ್ತವೆ, ಬಹುಮತದಿಂದ ಗೆಲ್ಲುವವರು ಮಾತ್ರವೇ ಅಧಿಕಾರಕ್ಕೆ ಬರುತ್ತಾರೆ. ಅಂಥ ಬಹುಮತವು ಜನರ ನಿಲುವಿನ ನೀತಿ ಮತ್ತು ನಂಬಿಕೆಯ ಮೇಲೆ ನಿಂತಿರುತ್ತದೆ. ಯಾವುದೇ ಪ್ರಾದೇಶಿಕ ಇಲ್ಲವೇ ಒಂದು ಭಾಗದ ಇಂಥ ನಿರೂಪಣೆಗಳು ಜಾಗತಿಕ ನಿರೂಪಣೆಗಳ ಭಾಗವಾಗಬೇಕಿಲ್ಲ” ಎಂದು ತಿರುಮೂರ್ತಿ ವಿವರಿಸಿದರು.
“ಉಗ್ರರೆಂದರೆ ಉಗ್ರರು. ಅವರಲ್ಲಿ ಒಳ್ಳೆಯವರು ಕೆಟ್ಟವರು ಎಂದೆಲ್ಲ ಇಲ್ಲ. ಅವರೆಲ್ಲ ತಪ್ಪಿತಸ್ಥರು ಅಷ್ಟೆ ಎಂದ ಅವರು ತಪ್ಪಿಗೆ ಆದ್ಯತೆ ನೀಡುವುದನ್ನು ಮಾಡಿದರೆ ಅದು ನಮ್ಮ ಗುರಿಯನ್ನು ಮಸುಕಾಗಿಸುತ್ತದೆ ಎಂದು ಅವರು ಹೇಳಿದರು.

Join Whatsapp