ಉನ್ನಾವೊ : ಉತ್ತರ ಪ್ರದೇಶದ ಉನ್ನಾವೊದಲ್ಲಿ ಪತ್ರಕರ್ತ ಸೂರಜ್ ಪಾಂಡೆ ಎಂಬವರ ಶವ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ ಟೆಬಲ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಮಹಿಳಾ ಇನ್ಸ್ ಪೆಕ್ಟರ್ ಸುನೀತಾ ಚೌರಾಸಿಯಾ ಮತ್ತು ಕಾನ್ಸ್ ಟೆಬಲ್ ಅಮರ್ ಸಿಂಗ್ ತಮ್ಮ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಸೂರಜ್ ತಾಯಿ ಲಕ್ಷ್ಮಿ ದೇವಿ ಆರೋಪಿಸಿರುವ ಹಿನ್ನೆಲೆಯಲ್ಲಿ, ಪೊಲೀಸ್ ಸಿಬ್ಬಂದಿ ಇಬ್ಬರ ಮೇಲೂ ಐಪಿಸಿ ಕಲಂ 302 ಮತ್ತು 120 (ಬಿ) ಯಡಿ ಪ್ರಕರಣ ದಾಖಲಾಗಿದೆ.
ಗುರುವಾರ ಮುಂಜಾನೆ ಸೂರಜ್ ಗೆ ಫೋನ್ ಕರೆ ಬಂದಿತ್ತು, ಈ ಹಿನ್ನೆಲೆಯಲ್ಲಿ ಹೊರಗೆ ಹೋಗಿದ್ದ ಆತನ ಸುಳಿವಿರಲಿಲ್ಲ, ರಾತ್ರಿ ವೇಳೆ ಆತನ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ ಎಂದು ಲಕ್ಷ್ಮಿ ದೇವಿ ಹೇಳಿದ್ದಾರೆ.
ಶವ ರೈಲ್ವೆ ಹಳಿ ಬಳಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣದಂತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಇವರಿಗೆ ಪೊಲೀಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರು ಎಂದು ಕುಟುಂಬ ಆರೋಪಿಸಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.