ಮೊಗವೀರ – ಮುಸ್ಲಿಮರ ಸೌಹಾರ್ದ ಕದಡುವ ಹಿಂದಿನ ಆರ್ಥಿಕ ರಾಜಕಾರಣ !

Prasthutha|

✍🏻 ಪತ್ರಕರ್ತ ನವೀನ್ ಸೂರಿಂಜೆ

- Advertisement -

ಮೊಗವೀರ ಮತ್ತು ಮುಸ್ಲಿಮರನ್ನು ಎತ್ತಿಕಟ್ಟುವುದು ಸಂಘಪರಿವಾರಕ್ಕೆ ದುಬಾರಿ ಆಗಬಹುದು. 1990 ರ ದಶಕದಲ್ಲಿ  ಮೊಗವೀರರನ್ನು ಮುಸ್ಲೀಮರ ವಿರುದ್ದ ಎತ್ತಿಕಟ್ಟಿದಂತೆ ಈಗಲೂ ಮಾಡಲು ವ್ಯರ್ಥ ಪ್ರಯತ್ನ ಮಾಡುತ್ತಿದೆ. ಹಾಗಾಗಿಯೇ ಹಸಿಮೀನು ಬಂದರ್ ನಲ್ಲಿ ಹಾಕಲಾಗಿದ್ದ ಸದುದ್ದೇಶದ (ಹಿಂದೂ ಹಬ್ಬಗಳಿಗೂ ಅನ್ವಯಿಸುವ) ಬ್ಯಾನರ್ ಅನ್ನು ತನ್ನ ಕೋಮು ರಾಜಕಾರಣಕ್ಕೆ ಬಳಸುತ್ತಿದೆ.

ಸಂಘಪರಿವಾರಕ್ಕೆ ಮೊಗವೀರರ ಜಾತ್ಯಾತೀತತೆ ಮತ್ತು ಅದಕ್ಕಾಗಿನ ಅವರ ಬದ್ಧತೆಯ ಬಗ್ಗೆ ನೆನಪಿರಬೇಕು. ನೆನಪಿಲ್ಲ ಎಂದಾದರೆ ತೀರಾ ಇತ್ತಿಚೆಗೆ ಅಂದರೆ ಹತ್ತನ್ನೆರಡು ವರ್ಷದ ಹಿಂದೆ ಮೊಗವೀರರ ಪವಿತ್ರ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಬೇಕು.

- Advertisement -

ನಾನಾಗ ಮಂಗಳೂರು ವರದಿಗಾರನಾಗಿದ್ದೆ. ಉರ್ವ ಮಾರಿಯಮ್ಮ‌ ದೇವಸ್ಥಾನದ ಪಕ್ಕದ ಜಮೀನನ್ನು ಬಿಲ್ಡರ್ ಒಬ್ಬರಿಗೆ ಮಾರಾಟ ಮಾಡಲಾಗಿತ್ತು. ಆ ಜಮೀನಿನ ಪಕ್ಕದಲ್ಲಿ ನಾಗನ ಕಲ್ಲುಗಳಿದ್ದವು. ಬಿಲ್ಡರ್ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಕೋಮುವಾದಿಗಳಿಗೆ ಅಷ್ಟೇ ಸಾಕಾಗಿತ್ತು. ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಕೋಮುವಾದಿಗಳು ಜಮೀನಿಗೆ ದಾಳಿ ಮಾಡಿದರು. ಉರ್ವ ಮಾರಿಯಮ್ಮ ದೇಗುಲದ ಆಡಳಿತ ಮಂಡಳಿ ಮತ್ತು ಮೊಗವೀರ ಸಮುದಾಯ ಮುಸ್ಲಿಂ ಸಮುದಾಯದ ಬಿಲ್ಡರ್ ಪರ ನಿಂತಿತ್ತು. ಉರ್ವ ಮಾರಿಯಮ್ಮ ದೇಗುಲದ ಎದುರು ಕೋಮುಘರ್ಷಣೆ ಆಗುವುದನ್ನು ಮೊಗವೀರರು ಇಷ್ಟಪಡಲಿಲ್ಲ.

ಆದರೆ, ಕೋಮುವಾದಿಗಳು ಹಠ ಬಿಡಲಿಲ್ಲ. ಜೆಸಿಬಿಯನ್ನು ತಡೆದು, ಗದ್ದಲ ಎಬ್ಬಿಸಿದರು. ಆಗ ಮೊಗವೀರರು ನೇರ ಫೀಲ್ಡಿಗಿಳಿದರು. ಒಬ್ಬೊಬ್ಬ ಕೋಮುವಾದಿಯನ್ನು ಅಟ್ಟಾಡಿಸಿದರು. ಇಡೀ ಘಟನೆಯನ್ನು ಹುಟ್ಟುಹಾಕಿದ್ದ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ನಾಪತ್ತೆಯಾಗಿದ್ದರು. ಎಫ್ಐಆರ್ ದಾಖಲಾಗದೇ ಇದ್ದರೂ ಒಬ್ಬ ಕಾರ್ಪೋರೇಟರ್ ಊರು ಬಿಟ್ಟು ಹೋಗ್ತಾರೆ ಅಂದರೆ ಮೊಗವೀರರ ಸಾಮರ್ಥ್ಯ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು‌. ಈ ಮಧ್ಯೆ ಮೊಗವೀರರು ಉರ್ವ ಮಾರಿಯಮ್ಮ ದೇಗುಲದ ಎದುರು ಖಂಡನಾ ಸಭೆ ಆಯೋಜಿಸಿದ್ದರು. ಇಷ್ಟೆಲ್ಲಾ ಆದ ಮೇಲೆ ಸಂಘಪರಿವಾರದ ಹಿರಿಯರಿಗೆ ಬುದ್ದಿ ಬಂತು. ಮೊಗವೀರರ ಎದುರು ನಮ್ಮ ಕೋಮು ರಾಜಕೀಯ ನಡೆಯಲ್ಲ ಎಂದು ಅರಿತು ಉರ್ವ ಮಾರಿಯಮ್ಮ ಕ್ಷೇತ್ರದಲ್ಲಿ ಕ್ಷಮೆ ಕೇಳಲು ಮುಂದಾದರು‌. “ಖಂಡನಾ ಸಭೆಗೆ ಆರ್ ಎಸ್ ಎಸ್ ಮುಖಂಡರು ಆಗಮಿಸಿ ಮೊಗವೀರರ ಗುರಿಕಾರರ ಎದುರು ಕ್ಷಮೆ ಕೇಳಬೇಕು” ಎಂದು ಮೊಗವೀರ ಸಮುದಾಯ ಒತ್ತಾಯಿಸಿತ್ತು.

ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರು, ಆರ್ ಎಸ್ ಎಸ್ ಮುಖಂಡರು ಉರ್ವ ಮಾರಿಯಮ್ಮ ದೇಗುಲದ ಎದುರಿನ ಸಭೆಗೆ ಬಂದರು. ಅಷ್ಟರಲ್ಲಿ ಮೊಗವೀರರ ಸಭೆ ಆರಂಭವಾಗಿತ್ತು. ವೇದಿಕೆಯಲ್ಲಿ ಮೊಗವೀರರ ಗುರಿಕಾರರಿದ್ದರು. ಆರ್ ಎಸ್ಎಸ್ ಮುಖಂಡರು ಬರುತ್ತಿದ್ದಂತೆ ಮೊಗವೀರ ಪದಾಧಿಕಾರಿಯೊಬ್ಬರು ವೇದಿಕೆಯಲ್ಲಿ ಆಸನ ಹಾಕಿದರು. ಆರ್ ಎಸ್ ಎಸ್ ಮುಖಂಡರು ವೇದಿಕೆಗೆ ಹೋಗುತ್ತಿದ್ದಂತೆ “ತಿರ್ತು ಜಪುಡಾಲೆಯೇ. ಅಕ್ಲೆಗು ಎಂಚಿನ ಚೇರ್ ಪಾಡುನು ? ನಮ್ಮ ಗುರಿಕಾರೆರ್ನ ಎದುರು ಕುಲ್ಲುದು ಪಾತೆರ್ನು ದಾದ ? ಉಂತುಂದು ಪಾತೆರಡು” (ಕೆಳಗೆ ಇಳಿಸ್ರಿ ಅವರನ್ನು. ಅವರಿಗೆ ಎಂತ ಚೇರ್ ಹಾಕೋದು ? ನಮ್ಮ ಗುರಿಕಾರರ ಎದುರು ಅವರು ಕೂತು ಮಾತನಾಡುವುದೇ ? ನಿಂತೇ ಮಾತಾಡಲಿ) ಎಂದು ಸಭೆ ಜೋರಾಗಿ ಆಗ್ರಹಿಸಿತು. ಆರ್ ಎಸ್ ಎಸ್ ಮುಖಂಡರಿಗಾಗಿ ವೇದಿಕೆಗೆ ತಂದಿದ್ದ ಚೇರ್ ಅನ್ನು ಕೆಳಗಿಳಿಸಲಾಯಿತು. ಕೂರಲು ಹೊರಟಿದ್ದ ಆರ್ ಎಸ್ ಎಸ್ ಮುಖಂಡ ನಿಂತುಕೊಂಡೇ ಕ್ಷಮೆ ಕೇಳಿದರು. ಕ್ಷಮೆ ಕೇಳಿದ ನಂತರವೂ ಮೊಗವೀರರ ಆಕ್ರೋಶ ತಣ್ಣಗಾಗಲಿಲ್ಲ. “ನಾಪತ್ತೆಯಾಗಿರುವ ಆ ಬಿಜೆಪಿ ಕಾರ್ಪೋರೇಟರ್ ರನ್ನು ನಮ್ಮ ಮುಂದೆ ತಂದು ನಿಲ್ಲಿಸಿ” ಎಂದು ಮೊಗವೀರರು ಆಗ್ರಹಿಸಿದರು. ಮೊಗವೀರರನ್ನು ಆರ್ ಎಸ್ ಎಸ್ ನಾಯಕರು ಸಮಾದಾನಿಸಿ ಸಭೆಯಿಂದ ಹೊರಹೋಗುವಷ್ಟರಲ್ಲಿ ಬೆವರು ಕಿತ್ತು ಬಂದಿತ್ತು.

ಯಾವುದೇ ಶ್ರಮಜೀವಿಗಳ ಮಧ್ಯೆ ಬರುವ ಕೋಮುವಾದವು ನೇರ ಅವರ ಹೊಟ್ಟೆಗೆ ಹೊಡೆಯುತ್ತದೆ. ಮೊಗವೀರರು ಮೀನು ಹಿಡಿದರೆ, ಬ್ಯಾರಿ ಮುಸ್ಲೀಮರು ಮೀನು ಹರಾಜಿನಲ್ಲಿ ಭಾಗವಹಿಸಿ ಮೀನನ್ನು ವಲಯವಾರು ಹಂಚುತ್ತಾರೆ. ಮೊಗವೀರ ಮಹಿಳೆಯರು ಮನೆ ಮನೆಗೂ, ಮಾರುಕಟ್ಟೆಯಲ್ಲೂ ಬುಟ್ಟಿಯಲ್ಲಿ ಮೀನು ವ್ಯಾಪಾರ ಮಾಡಿದರೆ ಬ್ಯಾರಿ ಮುಸ್ಲೀಮರು ಸೈಕಲ್ ನಲ್ಲಿ ಕರಾವಳಿಯ ಹಳ್ಳಿಗೂ, ಟೆಂಪೋಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ಸರಬರಾಜು ಮಾಡುತ್ತಿದ್ದರು. ಯಾವಾಗ ಕರಾವಳಿಯ ಮೀನಿಗೆ ವಿದೇಶದಲ್ಲಿ ಬೇಡಿಕೆ ಜಾಸ್ತಿಯಾಯ್ತೋ, ಆಗ ಈ ಎರಡು ಸಮುದಾಯದ ಮಧ್ಯೆ ಕೋಮುಗಲಭೆಗಳು ಪ್ರಾರಂಭವಾಯಿತು. ಸಹೋದರರಂತಿದ್ದ ಮೊಗವೀರರು ಮತ್ತು ಬ್ಯಾರಿ ಮುಸ್ಲೀಮರು ಸುರತ್ಕಲ್ ಕೋಮುಗಲಭೆಯಲ್ಲಿ ಕಚ್ಚಾಡಿಕೊಂಡರು. ಬ್ಯಾರಿ ಮುಸ್ಲೀಮರಿಂದ ಮೀನು ಪಡೆದುಕೊಳ್ಳಬಾರದು ಎಂಬ ಮೊದಲ ತಾಕೀತು ಬಂದಿದ್ದೇ ಅಂದು. ಅಂದಿನಿಂದ ಕರಾವಳಿಗೆ ಮೀನು ದುಬಾರಿಯಾಯ್ತು. ವಿದೇಶಕ್ಕೆ ಮೀನು ಸರಬರಾಜು ಮಾಡುವ ರಫ್ತು ಕಂಪನಿಗಳು ಹೆಚ್ಚಾದವು. ನಮ್ಮೂರಲ್ಲೇ ಸಮುದ್ರ ಇದ್ರೂ, ನಮ್ಮವರೇ ಮೀನು ಹಿಡಿದ್ರೂ ನಮಗ್ಯಾಕೆ ತಾಜಾ ಮತ್ತು ಗುಣಮಟ್ಟದ ಮೀನು ದೊರೆಯತ್ತಿಲ್ಲ ಎಂದು ಯಾವತ್ತಾದರೂ ಯೋಚಿಸಿದ್ದೀರಾ ? ಮಾಲ್, ಮಾರ್ಟ್ ಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ಯಾಕೆಟ್ ನಲ್ಲಿ ಸಿಗುವಂತಹ ತಾಜಾ ಮೀನು ನಮ್ಮದೇ ಸಮುದ್ರ ಬದಿಯ ಮಾರ್ಕೆಟ್ ನಲ್ಲಿ ಯಾಕೆ ಸಿಕ್ತಾ ಇಲ್ಲ?. ಯಾಕೆಂದರೆ ಸ್ಥಳೀಯ ಮೀನು ಉದ್ಯಮವನ್ನು ಧರ್ಮಾಧರಿತವಾಗಿ ಒಡೆದು ಕುಲಗೆಡಿಸಿ ಉದ್ಯಮವನ್ನೀಗ ಬಹುರಾಷ್ಟ್ರೀಯ ಕಂಪನಿಗಳು ಮತ್ತು ರಫ್ತು ಕಂಪನಿಗಳು ಆಳ್ವಿಕೆ ಮಾಡುತ್ತಿದೆ. ಮೊಗವೀರರೂ ಅಲ್ಲದ, ಮುಸ್ಲೀಮರೂ ಅಲ್ಲದ ಉತ್ತರ ಭಾರತದ ಬಲಾಡ್ಯ ಜಾತಿಗಳ ಬಹುರಾಷ್ಟ್ರೀಯ ಕಂಪನಿಗಳು ಈಗ ಮೀನು ರಫ್ತು ಉಧ್ಯಮವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಇದು ಕೋಮುವಾದದ ಹಿಂದಿರುವ ಆರ್ಥಿಕ ರಾಜಕಾರಣ !



Join Whatsapp