ಶ್ರೀನಗರ: ಜಮ್ಮು -ಕಾಶ್ಮೀರ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೊಟಗೊಂಡಿದ್ದು, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಬಣದ 20 ನಾಯಕರು ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷತೆಯಿಂದ ಜಿ.ಎ. ಮೀರ್ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವರು, ಶಾಸಕರು ಸೇರಿದಂತೆ ನಾಯಕರು ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವಂತೆ ಹೈಕಮಾಂಡ್ ಗೆ ಪತ್ರ ಬರೆದಿರುವುದಾಗಿ ರಾಜೀನಾಮೆ ನೀಡಿರುವ ಜಿ.ಎನ್. ಮೋಂಗಾ ಮತ್ತು ವಿಕಾರ್ ರಸೂಲ್ ಹೇಳಿದರು.
“ಅಧ್ಯಕ್ಷರನ್ನು ಮೂರು ವರ್ಷಗಳ ಅವಧಿಗೆ ನೇಮಿಸಲಾದರೂ ಈಗ ಏಳು ವರ್ಷಗಳು ಕಳೆದಿವೆ. ಹೀಗಾಗಿ ನಾಯಕತ್ವ ಬದಲಾವಣೆ ಮಾಡದೆ ಪಕ್ಷದ ಬೇರೆ ಹುದ್ದೆಗಳನ್ನು ವಹಿಸಿಕೊಳ್ಳುವುದಿಲ್ಲ” ಎಂದು ವಿಕಾರ್ ರಸೂಲ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿಗೆ 20 ದಿನಗಳ ಹಿಂದೆಯೇ ರಾಜೀನಾಮೆ ಪತ್ರವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.