ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಟ್ ಕಾಯಿನ್ ಆರೋಪಿ ಶ್ರೀಕಿ ಬಳಸಿಕೊಂಡು ಅಕ್ರಮ: ಗೃಹ ಸಚಿವ

Prasthutha|

ಬೆಂಗಳೂರು; ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಯನ್ನು ಬಳಸಿಕೊಂಡು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಕ್ ಮಾಡಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯೇ ಅಕ್ರಮ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಖಾಸಗಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ನೀಡಿದ ಅವರು, ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕೆಲವು ಕಾಂಗ್ರೆಸ್ ಪಕ್ಷದ ಮಿತ್ರರೇ ತಮಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೆಪಿವೈಸಿಸಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಆನ್ ಲೈನ್ ಮತದಾನ ನಡೆದಿದ್ದು, ಇದರಲ್ಲಿ ಹ್ಯಾಕ್ ಆಗಿದೆ ಎಂಬ ಸಂದೇಹವಿದೆ. ಈ ಕುರಿತು ವಿಚಾರಣೆ ನಡೆಸುವಂತೆ ಕೇಳುತ್ತಿದ್ದಾರೆ ಎಂದರು.

ಇದೇ ಬಿಟ್ ಕಾಯಿನ್ ಆರೋಪಿ ಶ್ರೀಕಿಯನ್ನು ಬಳಸಿಕೊಂಡು ಆನ್ ಲೈನ್ ವೋಟಿಂಗ್ ನಲ್ಲಿ ಹ್ಯಾಕ್ ಮಾಡಲಾಗಿದೆ. ಈತನ ಮೂಲಕ ಎಲ್ಲಾ ಮತಗಳು ಒಂದೇ ಕಡೆ ಹೋಗುವಂತೆ ನೋಡಿಕೊಂಡಿದ್ದರು ಎಂದು ಕಾಂಗ್ರೆಸ್ ಮಿತ್ರರೇ ಹೇಳುತ್ತಿದ್ದಾರೆ. ಈ ವಿಷಯವನ್ನು ಇದೀಗ ಬಹಿರಂಗಪಡಿಸುತ್ತಿದ್ದೇನೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

- Advertisement -

ಈ ಕುರಿತು ತಾವು ಹೆಚ್ಚಿಗೆ ಹೇಳುವುದೇನು ಇಲ್ಲ. ಯುಬಿ ಸಿಟಿಯಲ್ಲಿ ನಡೆದ ಗಲಾಟೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಸಿಕ್ಕಿಬಿದ್ದಿದ್ದರು. ಇನ್ನು ಗೋವಾದಲ್ಲಿನ ಮತ್ತೊಂದು ಮಾದಕ ದ್ರವ್ಯ ಪ್ರಕರಣದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕರ ಮಗ ಸಿಲುಕಿಕೊಂಡಿದ್ದರು. ಆಗಿನ ಸರ್ಕಾರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ. ಏನೇ ಆಗಲಿ ಚುನಾವಣೆಯಲ್ಲಿ ಹ್ಯಾಕಿಂಗ್ ಆಗಿರುವ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್ ಮುಖಂಡರು ಕೋರಿದರೆ ಅದಕ್ಕೆ ಸರ್ಕಾರ ಸಿದ್ಧ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರು ಬಿಟ್ ಕಾಯಿನ್ ವಿಚಾರದಲ್ಲಿ ರಾಜಕೀಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳ ಮೂಲಕವೂ ತನಿಖೆ ನಡೆಯುತ್ತಿದೆ. ಶ್ರೀಕಿಯಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್ ಗಳು, ಮತ್ತಿತರ ಸಾಧನ, ಸಲಕರಣೆಗಳ ಪರಿಶೀಲನೆಯೂ ನಡೆಯುತ್ತಿದೆ. ಭಾರತೀಯ ವಿಜ್ಞಾನ ಮಂದಿರದ ತಜ್ಞರ ನೆರವನ್ನೂ ಸಹ ಪಡೆಯಲಾಗಿದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಬಿಜೆಪಿ ವರಿಷ್ಠರಿಗೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಇದೆ. ಗೃಹ ಸಚಿವ ಅಮಿತ್ ಶಾ ಅವರು ಪ್ರತಿಯೊಂದು ವಿಷಯದಲ್ಲೂ ಅಪ್ ಡೇಟ್ ಆಗುತ್ತಾರೆ. ಎಲ್ಲಾ ವಿವರಗಳನ್ನು ಅವರು ಪಡೆಯುತ್ತಾರೆ. ಬಿಜೆಪಿ ವರಿಷ್ಠರು ಕೂಡ ಈ ವಿಷಯಲದಲ್ಲಿ ಗಂಭೀರವಾಗಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಶ್ರೀಕಿ ಜೀವಕ್ಕೆ ಅಪಾಯವಿದೆ ಎಂದು ಕಾಂಗ್ರೆಸ್ ಮುಖಂಡರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈ ಪ್ರಕರಣದ ಆರೋಪಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

Join Whatsapp